
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಂಸ್ಥೆಯ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಅವರನ್ನು ಆಗಸ್ಟ್ 5 ರವರೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ವಶಕ್ಕೆ ನೀಡಲಾಗಿದೆ.
ಇಂದು ಮಧ್ಯಾಹ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಸಯ್ಯದ್ ರಿಜಾಜ್ ನನ್ನು ಕರೆತಂದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಈ ಹಿನ್ನಲೆಯಲ್ಲಿ ಸಯ್ಯದ್ ರಿಯಾಜ್ ಅವರಿಗೆ ಜಾಮೀನು ನಿರಾಕರಿಸಿದ ಕೋರ್ಟ್, 10 ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡಿದೆ. ಜಾಮೀನು ಕೋರಿ ರಿಯಾಜ್ ಪರ ವಕೀಲರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ ಆಗಸ್ಟ್ 5ರವರೆಗೆ ರಿಯಾಜ್ ಅವರನ್ನು ಎಸ್ ಐಟಿ ವಶಕ್ಕೆ ನೀಡಿದೆ.
ಅನಾರೋಗ್ಯ ಹಿನ್ನಲೆಯಲ್ಲಿ ನನಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ರಿಯಾಜ್ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೂ ಮುನ್ನ ಕೋರ್ಟ್ ನಲ್ಲಿ ಕಣ್ಣೀರು ಸುರಿಸಿದ ರಿಯಾಜ್ ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ನನ್ನ ಬಗ್ಗೆ ಬೇಕಾದರೆ ಹಿರಿಯ ನ್ಯಾಯಾಧೀಶರಲ್ಲಿ ಕೇಳಿ, ಅವರ ಜೊತೆ ಕೆಲಸ ಮಾಡಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.
ಆದರೆ, ವಕೀಲ ಪಿಪಿ ರಮೇಶ್ ಬಾಬು ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ರಿಯಾಜ್ ಅವರು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವರದಿ ನೀಡಿದೆ ಎಂದು ವಾದ ಮಂಡಿಸಿದರು.
ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದ ಅಧಿಕಾರಿಯೊಬ್ಬರ ಬಂಧನವಾದಂತಾಗಿದೆ. ಒಟ್ಟಾರೆ ಬಂಧಿತರ ಸಂಖ್ಯೆ 5ಕ್ಕೇರಿಕೆಯಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಇಡೀ ಭ್ರಷ್ಟಾಚಾರಕ್ಕೆ ಮೂಲ ರುವಾರಿ ಎಂದು ಹೇಳಲಾಗುತ್ತಿರುವ ಲೋಕಾಯುಕ್ತ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಆಗಿರುವ ಸಯ್ಯದ್ ರಿಯಾಜ್‌ರನ್ನು ನಿನ್ನೆ ಬಂಧಿಸಲಾಗಿತ್ತು.
ಧಾರ್ಮಿಕ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಸೈಯ್ಯದ್ ರಿಯಾಜ್ ಅನಾರೋಗ್ಯದಿಂದ ಕೋರಮಂಗಲದ ತಮ್ಮ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ 2 ದಿನಗಳ ಹಿಂದೆಂಯೇ ದಾಖಲಾಗಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್‍ಐಟಿ ಅಧಿಕಾರಿಗಳು, ಮಧ್ಯಾಹ್ನವೇ ಆಸ್ಪತ್ರೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದರು. ರಿಯಾಜ್‍ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಅನಾರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನಿಯಮಗಳ ಪ್ರಕಾರ ರಿಯಾಜ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ ನಂತರ, ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿತ್ತು.
Advertisement