
ನವದೆಹಲಿ: ಬಿಜೆಪಿ ಪಕ್ಷವೂ ಸೇರಿದಂತೆ ಹಲವು ಪಕ್ಷದ ಮುಖಂಡರು, ಖ್ಯಾತ ನ್ಯಾಯಾಧೀಶರು ಮತ್ತಿತರ ಗಣ್ಯರು ಮುಂಬೈ ಸರಣಿ ಸ್ಫೋಟದ ತಪ್ಪಿತಸ್ಥ ಯಾಕೂಬ್ ಮೆಮನ್ ಬೆಂಬಲಕ್ಕೆ ಭಾನುವಾರ ಒಗ್ಗಟ್ಟಾಗಿ ನಿಂತಿದ್ದು, ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಕ್ಷಮಾದಾನ ನೀಡುವಂತೆ ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ನೂತನ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ಸಹಿದಾರರಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಮಾಜಿ ಬಿಜೆಪಿ ಸದಸ್ಯ ರಾಮ್ ಜೇಠ್ಮಲಾನಿ ಕೂಡ ಸೇರಿದ್ದು, ಜುಲೈ ೩೦ ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ೧೫ ಪುಟಗಳ ಅರ್ಜಿಯಲ್ಲಿ ಹಲವಾರು ಕಾನೂನಾತ್ಮಕ ಅಂಶಗಳನ್ನು ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ಚರ್ಚಿಸಿದ್ದು ಮೆಮನ್ ನ ಕ್ಷಮಾದಾನಕ್ಕೆ ವಾದ ಮಂಡಿಸಲಾಗಿದೆ.
"ಕ್ಷಮಾದಾನ ನೀಡುವುದರಿಂದ ಈ ರಾಷ್ಟ್ರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಶಕ್ತಿಯುತ ಸಂದೇಶವನ್ನು ಸಾರುವುದಲ್ಲದೆ ಒಂದೆ ದೇಶವಾಗಿ ನಾವು ನ್ಯಾಯಬದ್ಧವಾದ ಕ್ಷಮಾದಾನದ ಸಂದೇಶ ಮತ್ತು ಮಹತ್ವವನ್ನು ಸಾರುವ ಅವಕಾಶ ಇದೆ. ಮನುಷ್ಯರನ್ನು ಗಲ್ಲಿಗೇರಿಸುವುದು ರಕ್ತ ಹರಿಸುವುದು ಈ ದೇಶವನ್ನು ಸುರಕ್ಷಿತವಾಗಿಸುವುದಿಲ್ಲ ಬದಲಾಗಿ ನಮ್ಮನ್ನು ಕೆಳಕ್ಕೆ ನೂಕುತ್ತದೆ" ಎಂದು ಸಹಿದಾರರು ವಾದಿಸಿದ್ದಾರೆ,
ಕಾಂಗ್ರೆಸ್ ಸಂಸದ ಮಣುಶಂಕರ್ ಅಯ್ಯರ್, ಸಿಪಿಎಂ ನ ಸೀತಾರಮ್ ಯೆಚೂರಿ, ಡಿಎಂಕೆಯ ಟಿ ಶಿವಾ, ಚಿತ್ರನಟ ನಾಸಿರುದ್ದೀನ್ ಷಾ, ನಿರ್ದೇಶಕ ಮಹೇಶ್ ಭಟ್, ನ್ಯಾಯಧೀಶರುಗಳಾದ ಪನಚಂದ್ ಜೈನ, ಎಸ ಎನ್ ಭಾರ್ಘವ, ಪಿ ಬಿ ಸಾವಂತ್, ಎಚ್ ಸುರೇಶ್, ಕೆ ಪಿ ಶಿವ ಸುಬ್ರಮಣ್ಯನ್, ನಾಗಮೋಹನ್ ದಾಸ್, ಅಕ್ಯಾಡೆಮಿಕ್ ವಲಯದ ಇರ್ಫಾನ್ ಹಬೀಬ್, ಅರ್ಜುನ್ ದೇವ್, ಡಿ ಎನ್ ಜಾ ಸಾಮಾಜಿಕ ಕಾರ್ಯಕರ್ತರಾದ ಅರುಣ್ ರಾಯ್, ಜೀನ್ ಡ್ರೀಜ್ ಮತ್ತಿತರು ಕ್ಷಮಾದಾನ ಕೋರಿ ಸಹಿ ಮಾಡಿದ್ದಾರೆ.
Advertisement