
ರಾಮೇಶ್ವರಂ: ಸೋಮವಾರ ಮೇಘಾಲಯದ ಶಿಲ್ಲಾಂಗ್ ನಲ್ಲಿ ವಿಧಿವಶರಾದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ ಅವರ ಹುಟ್ಟೂರು ರಾಮೇಶ್ವರಂ ತಲುಪಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ದೆಹಲಿಯಲ್ಲಿ ಗಣ್ಯರ ಅಂತಿಮ ನಮನದ ಬಳಿಕ ಇಂದು ಬೆಳಗ್ಗೆ ಕಲಾಂ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ವಿಮಾನ ಪಾಲಂ ವಿಮಾನ ನಿಲ್ದಾಣದಿಂದ ತಮಿಳುನಾಡಿನ ಮದುರೈ ಆಗಮಿಸಿತ್ತು. ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂಗೆ ತರಲಾಗಿದೆ.
ಕಲಾಂ ಅವರ ನಿವಾಸದ ಬಳಿ ಸಂಬಂಧಿಕರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಹಿಂದೂ ಧರ್ಮದ ಪುಣ್ಯ ಕ್ಷೇತ್ರವಾದ ಸಮುದ್ರ ತೀರದ ರಾಮೇಶ್ವರಂ ಚೆನ್ನೈನಿಂದ ೬೦೦ ಕಿಮೀ ದೂರದಲ್ಲಿದೆ. ಕಲಾಂ ಅವರು ಜನಿಸಿದ್ದು ಇಲ್ಲಿಯೇ ಹಾಗು ಬಡತನದಲ್ಲಿ ತಮ್ಮ ಬಾಲ್ಯವನ್ನು ಇಲ್ಲಿ ಕಳೆದಿದ್ದರು.
ನಿನ್ನೆ ಅಸ್ಸಾಂನ ಗುವಾಹಟಿಯಿಂದ ವಾಯುಪಡೆಯ ವಿಶೇಷಾ ವಿಮಾನದಲ್ಲಿ ಕಲಾಂ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಗಿತ್ತು. ದೆಹಲಿ ಪಾಲಂ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು ಅಗಲಿದ ಭಾರತ ರತ್ನಕ್ಕೆ ಅಂತಿಮ ನಮನ ಸಲ್ಲಿಸಿದ್ದರು.
83 ವರ್ಷದ ಅಬ್ದುಲ್ ಕಲಾಂ ನಿನ್ನೆ ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ನೀಡುತ್ತಿರಬೇಕಾದರೆ ಏಕಾಏಕಿ ಕುಸಿದುಬಿದ್ದಿದ್ದರು. ಈ ವೇಳೆ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡುಬಂದಿತ್ತು. ಕೂಡಲೇ ಅವರನ್ನು ಶಿಲ್ಲಾಂಗ್ ನ ಬೆಥೇನಿ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದರು.
Advertisement