ಕಲಾಂ ಅಂತಿಮ ಯಾತ್ರೆ ಆರಂಭ, ಅಗಲಿದ ಚೇತನಕ್ಕೆ ಸಾವಿರಾರು ಜನರಿಂದ ಅಶ್ರುತರ್ಪಣ
ರಾಮೇಶ್ವರಂ: ದೇಶ ಕಂಡ ಅಪ್ರತಿಮ ರಾಷ್ಟ್ರಪತಿ, ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಅಂತಿಮ ಯಾತ್ರೆ ಆರಂಭವಾಗಿದ್ದು, ಅಗಲಿದ ಚೇತನಕ್ಕೆ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿದರು.
ತಮಿಳುನಾಡಿನ ರಾಮೇಶ್ವರಂನ ಕಲಾಂ ಅವರ ನಿವಾಸದಿಂದ ಇಂದು ಬೆಳಗ್ಗೆ 10.30ರ ಸುಮಾರಿಗೆ ಸೇನಾ ವಿಶೇಷ ವಾಹನದಲ್ಲಿ ಮೆರವಣಿಗೆ ಸಾಗುತ್ತಿದ್ದು, ಅಂತಿಮ ಯಾತ್ರೆಯಲ್ಲಿ ಹಲವು ಗಣ್ಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದಾರೆ.
ಪೆಯಿಕುರುಂಬುನಲ್ಲಿ ಇಂದು ಮಧ್ಯಾಹ್ನ ಮುಸ್ಲಿಂ ಸಮುದಾಯದ ವಿಧಿವಿಧಾನದಂತೆ ಕಲಾಂ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಕ್ರಿಯೆಗೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಗಣ್ಯಾತಿಗಣ್ಯರಿಗಾಗಿ 50 ವಿವಿಐಪಿ ಹಾಗೂ 500 ವಿಐಪಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಲಾಂ ಅಂತ್ಯಕ್ರಿಯೆ ಹಿನ್ನೆಲೆ ತಮಿಳುನಾಡಿನಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಾಂ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ತಮಿಳುನಾಡಿನಲ್ಲಿ ಇಂದು ಯಾವುದೇ ಚಿತ್ರಗಳು ಪ್ರದರ್ಶನಗೊಳ್ಳುವುದು. ಫಿಲ್ಮಂ ಛೇಂಬರ್ ಸಹ ಸ್ಥಬ್ದಗೊಂಡಿದೆ. ಯಾವುದೇ ಆಟೋಗಳು ಬಿದಿಗಿಳಿದಿಲ್ಲ.
ನಿನ್ನೆ ವಿಮಾನವು ವಿಶೇಷ ಹೆಲಿಪ್ಯಾಡ್‍ನಲ್ಲಿ ಇಳಿಯುತ್ತಿದ್ದಂತೆ ಜನರ ನೂಕು ನುಗ್ಗಲು ಶುರುವಾಗಿತ್ತು. ತಕ್ಷಣ ಎಚ್ಚೆತ್ತ ಭದ್ರತಾ ತಂಡ ಜನರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಅವರ ಪಾರ್ಥಿವ ಶರೀರವನ್ನು ಮಧುರೆಗೆ ತಂದು ಅಲ್ಲಿಂದ 10ಕಿ.ಮೀ.ವರೆಗೆ ಸೇನಾ ವಾಹನದಲ್ಲಿ ತರಲಾಯಿತು, ಈ ವೇಳೆ ಮಾರ್ಗದುದ್ದಕ್ಕೂ ಜನರು ಅಗಲಿದ ನಾಯಕನಿಗೆ ಅಶ್ರುತರ್ಪಣಗೈದರು.
ಇಲ್ಲಿನ ಬಸ್ ಟರ್ಮಿನಸ್‍ನ ಪಕ್ಕದ ಮೈದಾನದಲ್ಲಿ ಕಲಾಂರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಯುವಜನರ ಸಮೂಹವೇ ಅಲ್ಲಿ ನೆರೆದಿತ್ತು. ಮಾಜಿ ರಾಷ್ಟ್ರಪತಿಯು ದೇಶದ ಭಾವಿ ಪ್ರಜೆಗಳ ಮೇಲಿಟ್ಟಿದ್ದ ಪ್ರೀತಿ, ಭರವಸೆಯನ್ನು ಇದು ಸಾಕ್ಷೀಕರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ