
ಲಿಬಿಯಾ: ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿರುವ ನಾಲ್ವರು ಭಾರತೀಯರ ಪೈಕಿ ಇಬ್ಬರು ಕನ್ನಡಿಗರನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ನಿವಾಸಿ ವಿಜಯ್ ಕುಮಾರ್ ಹಾಗೂ ರಾಯಚೂರಿನ ಲಕ್ಷ್ಮಿಕಾಂತ್ ಅವರನ್ನು ಉಗ್ರರು ಬಿಡುಗಡೆಗೊಳಿಸಿದ್ದಾರೆ ಎಂದು ಲಿಬಿಯಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಉಗ್ರರ ಬಳಿಯಿರುವ ಹೈದರಬಾದಿನ ಗೋಪಿಕೃಷ್ಣ ಮತ್ತು ಬಲರಾಮ್ ಅವರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.
ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಅಟ್ಟಹಾಸ ಮೆರೆಯುತ್ತಿರುವ ಇಸಿಸ್ ಉಗ್ರರು ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಯ ಬೆನ್ನಲ್ಲೇ ಲಿಬಿಯಾದಲ್ಲಿ ಇಸಿಸ್ ಉಗ್ರರು ನಾಲ್ವರು ಭಾರತೀಯರನ್ನು ಅಪಹರಿಸಿದ್ದರು.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ನಿನ್ನೆ ಲಿಬಿಯಾದ ಟ್ರೈಪೋಲೀಯ ಸಿರ್ತೆ ನಗರದಿಂದ ಇಸಿಸ್ ಭಯೋತ್ಪಾದಕರು ಅಪಹರಿಸಿದ್ದರು.
Advertisement