ಮ್ಯಾಗಿ ಪರೀಕ್ಷೆಗೆ ನಕಾರ: ಕೇಂದ್ರಕ್ಕೆ ಖಾದರ್ ಪತ್ರ

ಮ್ಯಾಗಿಯಲ್ಲಿ ವಿಷಕಾರಿ ಅಂಶ ಇರುವುದನ್ನು ಪತ್ತೆ ಹಚ್ಚಲು ಕಳುಹಿಸಿದ ಮಾದರಿಯನ್ನು ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆ ವಾಪಸ್ ಕಳುಹಿಸಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮ್ಯಾಗಿಯಲ್ಲಿ ವಿಷಕಾರಿ ಅಂಶ ಇರುವುದನ್ನು ಪತ್ತೆ ಹಚ್ಚಲು ಕಳುಹಿಸಿದ ಮಾದರಿಯನ್ನು ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆ ವಾಪಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪರೀಕ್ಷೆಗೆ ಕಳುಹಿಸಿದ ಮಾದರಿಯನ್ನು ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆ ಪರೀಕ್ಷೆಗೆ ಸ್ವೀಕರಿಸಿಲ್ಲ. ಸಂಸ್ಥೆಯ ನಿರ್ದೇಶಕಿ ಆಶಾ ಮಾರ್ಟಿನ್ ಎಂಬುವರು ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದಿದ್ದಾರೆ. ಕೇಂದ್ರ
ಸರ್ಕಾರದ ಆಹಾರ ಪ್ರಾ„ಕಾರದ ಶಿಫಾರಸಿನೊಂದಿಗೆ ಬಂದ ಮಾದರಿಯನ್ನು ಮಾತ್ರ ನಾವು ಸ್ವೀಕರಿಸುತ್ತೇವೆ. ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಆಹಾರ ಸಂಶೋಧನಾ ಸಂಸ್ಥೆಯಲ್ಲಿ ಪರಿಶೀಲನೆ ನಡೆಸಿಕೊಳ್ಳಿ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ನಾವು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪರೀಕ್ಷೆಗೆ ಕಳುಹಿಸಿದ್ದೆವು ಎಂದು ಖಾದರ್ ಹೇಳಿದರು.
ಕೇಂದ್ರಕ್ಕೆ ಆಕ್ಷೇಪ: ಕೇಂದ್ರ ಸರ್ಕಾರದ ಆರೋಗ್ಯ ಸಚಿವರಿಗೆ ಪತ್ರ ಬರೆದು ಘಟನೆ ಬಗ್ಗೆ ರಾಜ್ಯದ ಆಕ್ಷೇಪ ಸಲ್ಲಿಸುತ್ತೇವೆ. ಸಾರ್ವಜನಿಕ ಹಿತಾಸಕ್ತಿ ವಿಚಾರವಾದ್ದರಿಂದ ತ್ವರಿತ ವರದಿ ಬರುವ ಅಗತ್ಯವಿತ್ತು ಎಂದು ಹೇಳಿದರು.

ಸಿಎಫ್ ಟಿಆರ್‍ಐ ಮ್ಯಾಗಿ ಮಾದರಿ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಗರಬಾವಿಯಲ್ಲಿರುವ ಖಾಸಗಿ ಆಹಾರ ಸಂಶೋಧನಾ ಸಂಸ್ಥೆಯಿಂದ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕೇರಳ ರಾಜ್ಯದಲ್ಲಿರುವ ಸಂಸ್ಥೆಗೂ ಮಾದರಿಯನ್ನು ಕಳುಹಿಸಿಕೊಟ್ಟಿದ್ದೇವೆ. ಪರೀಕ್ಷಾ ವರದಿ ಬರುವುದಕ್ಕೆ ಇನ್ನು 48 ಗಂಟೆಗಳ ಅವಧಿ ಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ಯಾರೂ ಮ್ಯಾಗಿ ಖರೀದಿಸಬಾರದು. ಮಾರಾಟಮಾಡಬಾರದು. ಈ ಸಂಬಂಧ ನಾನು ಗ್ರಾಹಕರು ಮತ್ತು ಮಾರಾಟಗಾರರಲ್ಲಿ ಮನವಿ ಮಾಡುತ್ತೇನೆ ಎಂದರು.
ಬೇರೆ ರಾಜ್ಯದಲ್ಲಿ ಬ್ಯಾನ್ ಮಾಡಿದ್ದಾರೆಂದ ತಕ್ಷಣ ನಮ್ಮ ರಾಜ್ಯದಲ್ಲಿ ಮ್ಯಾಗಿ ನಿಷೇಧ ಮಾಡುವುದಕ್ಕೆ ಸಾಧ್ಯವಿಲ್ಲ. ವರದಿ ಬರುವವರೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.

ಮ್ಯಾಗಿಯಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಹೀರಾತಿನಲ್ಲಿ ಅಭಿನಯಿಸಿದ ನಟ-ನಟಿಯರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಎಲ್ಲವನ್ನೂ ಒಮ್ಮೆಲೆ ಮಾಡುವುದಕ್ಕೆ ಸಾಧ್ಯವಿಲ್ಲ. ಮೊದಲು ವರದಿ ಬರಲಿ. ಆ ಬಳಿಕ ನೋಡೋಣ ಎಂದರು.
ಸರ್ಕಾರ ಖಾಸಗಿ ಸಂಸ್ಥೆಯಿಂದ ನಡೆಸುವ ಪರೀಕ್ಷೆ ಎಷ್ಟರಮಟ್ಟಿಗೆ ವಿಶ್ವಾಸಾರ್ಹ? ಇದನ್ನು ನಂಬಿ ಕ್ರಮ ಕೈಗೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಸಂಸ್ಥೆಗೆ ಕೇಂದ್ರ ಸರ್ಕಾರದ ಆಹಾರ ಸಂಶೋಧನಾ ಪ್ರಾಧೀಕಾರದ ಮಾನ್ಯತೆ ಇದೆ ಎಂದರು.

ಮ್ಯಾಗಿ ಮಾತ್ರವಲ್ಲ ಎಲ್ಲ ನೂಡಲ್ಸ್ ಪರಿಶೀಲನೆ
ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಮಾತ್ರವಲ್ಲ ಎಲ್ಲ ಬಗೆಯ ನೂಡಲ್ಸ್ ಗಳನ್ನೂ ಭವಿಷ್ಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯಕ್ಕೆ ಮ್ಯಾಗಿ ಬಗ್ಗೆ ಮಾತ್ರ ಪರಿಶೀಲನೆ ನಡೆಸುತ್ತೇವೆ. ಆದರೆ ನಮ್ಮ ಆದ್ಯತೆ ಅದು ಮಾತ್ರವಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಬಗೆಯ ನೂಡಲ್ಸ್ ಗಳು ವಿಷರಹಿತವೇ? ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎಲ್ಲ ನೂಡಲ್ಸ್‍ಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com