
ನ್ಯೂಯಾರ್ಕ್ : ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ದೈತ್ಯ ಕಂಪೆನಿ ಸಿಸ್ಕೋದ ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಿಂದ ಭಾರತೀಯ ಸಂಜಾತೆ ಪದ್ಮಶ್ರೀ ವಾರಿಯರ್ ಕೆಳಗಿಳಿದಿದ್ದಾರೆ. ಅವರು ಇದೇ ಸೆಪ್ಟೆಂಬರ್ ವರೆಗೆ ಕಂಪೆನಿಯ ಸಲಹೆಗಾರ್ತಿಯಾಗಿ ಹುದ್ದೆ ಅಲಂಕರಿಸಲಿದ್ದಾರೆ.
ಕಂಪೆನಿಯ ಉನ್ನತ ಅಧಿಕಾರಿಗಳ ಹುದ್ದೆಗಳ ಪ್ರಮುಖ ಪುನರ್ರಚನೆಯಿಂದಾಗಿ ಈ ಬದಲಾವಣೆಯಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಫೋರ್ಬ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿದ, ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 84ನೇ ಸ್ಥಾನ ಪಡೆದಿದ್ದ ಪದ್ಮಶ್ರೀ ವಾರಿಯರ್ ಈ ತಕ್ಷಣದಿಂದಲೇ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಕಂಪೆನಿಯ ತಂತ್ರಜ್ಞಾನ, ವ್ಯಾಪಾರ ವಿಸ್ತರಣೆ ಕುರಿತು ಕಂಪೆನಿಗೆ ಸಲಹೆ-ಸೂಚನೆ ನೀಡಲಿದ್ದಾರೆ.
ಸಿಸ್ಕೋದ ಹೊಸ ಕಾರ್ಯಕಾರಿ ಸಮಿತಿಯ 10 ಮಂದಿ ನಾಯಕರಲ್ಲಿ ಭಾರತ ಮೂಲದ ಪಂಕಜ್ ಪಟೇಲ್ ಇದ್ದಾರೆ. 2008ರಲ್ಲಿ ಸಿಸ್ಕೋ ಕಂಪೆನಿಗೆ ಸೇರಿದ್ದ ಪದ್ಮಶ್ರೀ ವಾರಿಯರ್ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ನೂತನ ತಾಂತ್ರಿಕ ಅಧಿಕಾರಿ ಚಂಕ್ ರಾಬಿನ್ಸ್, ವಾರಿಯರ್ ಅವರು ಅತೀ ಗೌರವಾನ್ವಿತ ನಾಯಕರಾಗಿದ್ದು, ಕಂಪೆನಿಯ ಶ್ರೇಯಸ್ಸಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Advertisement