ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಣಿಪುರ ಹಠಾತ್ ದಾಳಿ: ನಾಲ್ಕು ದಿನಗಳ ಯೋಜನೆ; ೪೫ ನಿಮಿಷದ ಕಾರ್ಯಾಚರಣೆ

ಭಯೋತ್ಪಾದಕ ಸಂಘಟನೆ ಎನ್ ಎಸ್ ಸಿ ಎನ್-(ಕೆ) ಶಿಬಿರಗಳನ್ನು ನಾಶಪಡಿಸಲು ಭಾರತೀಯ ಸೇನೆಗೆ, ಯೋಜನೆಗೆ ಬೇಕಾಗಿದ್ದು ನಾಲ್ಕು ದಿನ ಆದರೆ ಕಾರ್ಯಾಚರಣೆಗೆ ತೆಗೆದುಕೊಂಡಿದ್ದು ಕೇವಲ ೪೫ ನಿಮಿಷ.

ನವದೆಹಲಿ: ಭಯೋತ್ಪಾದಕ ಸಂಘಟನೆ ಎನ್ ಎಸ್ ಸಿ ಎನ್-(ಕೆ) ಶಿಬಿರಗಳನ್ನು ನಾಶಪಡಿಸಲು ಭಾರತೀಯ ಸೇನೆಗೆ, ಯೋಜನೆಗೆ ಬೇಕಾಗಿದ್ದು ನಾಲ್ಕು ದಿನ ಆದರೆ ಕಾರ್ಯಾಚರಣೆಗೆ ತೆಗೆದುಕೊಂಡಿದ್ದು ಕೇವಲ ೪೫ ನಿಮಿಷ.

ಜೂನ್ ೪ ರಂದು ಸೇನಾ ಶಿಬಿರದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ೧೮ ಜನರನ್ನು ಕೊಂದ ನಂತರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಸಮಿತಿಯ ಸಭೆ ನಡೆದು ಎದುರುದಾಳಿ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸೇನಾಧ್ಯಕ್ಷ ದಲ್ಬೀರ್ ಸಿಂಗ್ ಸುಹಾಗ್ ಅವರಿಗೆ ಸಂದೇಶ ಸ್ಪಷ್ಟವಾಗಿತ್ತು. ೨೪ ಘಂಟೆಯೊಳಗೆ ಭಯೋತ್ಪಾದಕರಿಗೆ ಉತ್ತರಿಸಿ ಎಂದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸುಹಾಗ್ ಅವರಿಗೆ ಕಾರ್ಯಾಚರಣೆಯ ನೀಲಿ ನಕ್ಷೆ ಸಿದ್ಧಪಡಿಸುವ ಕೆಲಸ ವಹಿಸಲಾಯಿತು. ಒಂದು ಘಂಟೆಯ ನಂತರ ಅಕ್ಬರ್ ರಸ್ತೆಯ ರಾಜನಾಥ್ ಅವರ ಸ್ವಗೃಹದಲ್ಲಿ ಮತ್ತೊಂದು ಸಭೆ ನಿಯೋಜಿಸಲಾಯಿತು.

ಈ ಸಭೆಯಲ್ಲಿ ಸುಹಾಗ್ ಮತ್ತು ದೋಯಲ್ ಗಡಿ ದಾಳಿಗೆ ಯೋಜನೆ ಸಿದ್ಧಪಡಿಸಲು ವಿಶೇಷ ಕಾರ್ಯಾಚರಣೆ ಪಡೆಗೆ ೨-೩ ದಿನಗಳ ಸಮಯ ಬೇಕೆಂದರು. ಅರಣ್ಯ ಸಂಪತ್ತು ನಾಶವಾಗಬಹುದೆಂದು ವೈಮಾನಿಕ ದಾಳಿಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಆದರೆ ಸಭೆಯಲ್ಲಿ ನೆರೆದಿದ್ದವರೆಲ್ಲಾ ಭೂ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿದರು.

ಈ ಕಾರ್ಯಾಚರಣೆಗೆ ರಾಜನಾಥ್ ಸಿಂಗ್ ಸಂಪೂರ್ಣ ಒಪ್ಪಿಗೆ ಸೂಚಿಸಿದರು ಮತ್ತು ಸಭೆಯ ನಿರ್ಣಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಲಾಯಿತು. ಮೋದಿ ಅವರು ಈ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದರು. ಗುಪ್ತಚರ ವಿಭಾಗ ಮತ್ತು ಆರ್ ಎ ಡಬ್ಲ್ಯು ಗೆ ಸನ್ನದ್ಧರಾಗಲು ಸೂಚಿಸಲಾಯಿತು.

ರಾಜನಾಥ್ ಅವರ ಮನೆಯಲ್ಲಿ ಜೂನ್ ೪ ರಂದು ನಡೆದ ಎರಡನೇ ಸಭೆ ಮುಗಿದ ಕ್ಷಣಗಳ ನಂತರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಮನೆಯಲ್ಲಿ ತಡ ರಾತ್ರಿಯಲ್ಲಿ ಮತ್ತೊಂದು ಸಭೆ ಕರೆಯಲಾಯಿತು, ಅದರಲ್ಲೂ ಕೂಡ ದೋವಲ್ ಮತ್ತು ಸುಹಾಗ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಇವರಿಬ್ಬರೂ ಮಣಿಪುರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಕಾರ್ಯಾಚರಣೆಗೆ ಅಂತಿಮ ರೂಪು ನೀಡುವುದೆಂದು ನಿರ್ಣಯಿಸಲಾಯಿತು. ದೋವಲ್ ಮತ್ತು ಸುಹಾಗ್ ಪರಿಸ್ಥಿತಿಯ ಅವಲೋಕನಕ್ಕೆ ಜೂನ್ ೫ ರಂದು ಮಣಿಪುರಕ್ಕೆ ತೆರಳಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

"ದಟ್ಟ ಅರಣ್ಯಗಳ ಮಧ್ಯೆ ಹೋರಾಡಬಲ್ಲ ವಿಶೇಷ ಕಮ್ಮ್ಯಾಂಡೊಗಳ ಪಡೆ ರಚಿಸಲು ಸೇನಾಧ್ಯಕ್ಷರಿಗೆ ಸೂಚಿಸಲಾಯಿತು. ಈ ಕಾರ್ಯಾಚರಣೆಯ ಬಗ್ಗೆ ಕೆಲವೇ ಸೇನಾಧಿಕಾರಿಗಳಿಗೆ ತಿಳಿದಿತ್ತು. ಈ ದಾಳಿಯ ಬಗ್ಗೆ ಕೆಲವು ಮಯನ್ಮಾರ್ ಅಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು. ಭಾರತೀಯ ಸೇನೆಯ ೨೧ ಪ್ಯಾರಗಳಿಂದ ೭೦ ಕಮ್ಮ್ಯಾಂಡೋಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲಾಯಿತು" ಎಂದು ಮೂಲಗಳು ತಿಳಿಸಿವೆ.

ಮೊದಲು ಜೂನ್ ೮ ರಂದು ಈ ಕಾರ್ಯಾಚರಣೆ ನಡೆಸಲು ನಿಗದಿಯಾಗಿತ್ತು ಎಂದು ತಿಳಿದುಬಂದಿದೆ ಆದರೆ ಪ್ರಧಾನಿ ಮೋದಿ ಅವರು ಬಾಂಗ್ಲಾ ಪ್ರವಾಸದಿಂದ ಹಿಂದಿರುಗಿ ಬರಲು ಕಾರ್ಯಾಚರಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಪ್ರಧಾನಿ ಹಿಂದಿರುಗಿದ ನಂತರ ಜೂನ್ ೮ ರಂದು ದೋವಲ್ ಮತ್ತು ಸುಹಾಗ್ ಪ್ರಧಾನಿಯವರಿಗೆ ಕಾರ್ಯಾಚರಣೆಯ ವಿವರಗಳನ್ನು ತಿಳಿಸಿದ ನಂತರ ಜೂನ್ ೯ ಬೆಳಗ್ಗೆ ದಾಳಿ ನಡೆಸಲು ಹಸಿರು ನಿಶಾನೆ ದೊರಕಿತು.

ಈ ಎಲ್ಲಾ ಚಟುವಟಿಕೆಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಪರಿವೀಕ್ಷಣೆಯಲ್ಲಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಈ ದಾಳಿ ನಡೆಸಲು ಕಮ್ಯಾಂಡೊಗಳು ದಟ್ಟಾರಣ್ಯದಲ್ಲಿ ೫ ಕಿಲೋ ಮೀಟರ್ ಗಳವರೆಗೆ ಚಾರಣ ಮಾಡಬೇಕಾಯಿತು ಎಂದು ಕೂಡ ತಿಳಿದುಬಂದಿದೆ. ನಂತರ ತಂಡವನ್ನು ಎರಡು ವಿಭಾಗಳಾಗಿ ವಿಂಗಡಿಸಿ ದಾಳಿ ನಡೆಸಿದ್ದು ಭಯೋತ್ಪಾದಕರಿಗೆ ಅಘಾತವನ್ನುಂಟುಮಾಡಿದೆ.

"ನಿಖರವಾದ ಸಂಖ್ಯೆಯನ್ನು ನೀಡಲು ಕಷ್ಟ. ಆದರೆ ಎರಡು ಶಿಬಿರಗಳಲ್ಲಿ ಸುಮಾರು ೧೨೦ ಭಯೋತ್ಪಾದಕರು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿಯಿತ್ತು. ಕೆಲವೇ ಕೆಲವು ಭಯೋತ್ಪಾದಕರು ತಪ್ಪಿಸಿಕೊಂಡು ಓಡಿಹೋದರು ಆದರೆ ೧೦೦ ಕ್ಕಿಂತಲು ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇಡಿ ಕಾರ್ಯಾಚರಣೆಯನ್ನು ೪೫ ನಿಮಿಷಗಳಲ್ಲಿ ಮುಗಿಸಲಾಯಿತು. ಆದರು ಅಧಿಕೃತ ಘೋಷಣೆಗೆ ಮಧ್ಯಾಹ್ನದವರೆಗೂ ಹಿಡಿಯಿತು" ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com