
ಜೋಧಪುರ: ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ತೀವ್ರ ಹಿನ್ನಡೆಯಾಗುವ ತೀರ್ಪಿನಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಜಾಮೀನು ಮನವಿ ಅರ್ಜಿಯನ್ನು ತಿರಸ್ಕರಿಸಿದೆ. ಅಸಾರಾಂ ಲೈಂಗಿಕ ದೌರ್ಜನ್ಯ ಆರೋಪವನ್ನು ಎದುರಿಸುತ್ತಿದ್ದಾರೆ.
ಸಂಗತಿಗಳು ಮತ್ತು ಪ್ರಕರಣದದ ಸಂದರ್ಭಗಳನ್ನು ಅವಲೋಕಿಸಿ ಜಿಲ್ಲಾ ನ್ಯಾಯಾಧೀಶ ಮನೋಜ್ ಕುಮಾರ್ ವ್ಯಾಸ್ ಅವರು ಜಾಮೀನು ನಿರಾಕರಿಸಿದ್ದಾರೆ.
ಸೆಪ್ಟಂಬರ್ ೨೦೧೩ರಿಂದಲು ಅಸಾರಂ ಜೈಲುವಾಸ ಅನುಭವಿಸುತ್ತಿದ್ದಾರೆ.
"ಅಪರಾಧ ಎಸಗಿದ ಸಂದರ್ಭ ಮತ್ತು ಪರಿಸ್ಥಿತಿಯನ್ನು ಅವಲೋಕಿಸುವಂತೆ ನ್ಯಾಯಾಲಯಕ್ಕೆ ನಾವು ಮನವಿ ಮಾಡಿದ್ದೆವು. ನ್ಯಾಯಾಲಯ ಇದನ್ನು ಸಮ್ಮತಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ" ಎಂದು ಸಂತ್ರಸ್ತೆ ಪರ ವಕೀಲ ಪಿ ಸಿ ಸೋಲಂಕಿ ತಿಳಿಸಿದ್ದಾರೆ.
ಶುಕ್ರವಾರ ಆರೋಪಿ ಪರ ವಾದಿಸಿದ್ದ ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ತಮ್ಮ ಕಕ್ಷಿದಾರ ಮುಗ್ಧ ಎಂದು ವಾದಿಸಿ ಜಾಮೀನು ನೀಡುವಂತೆ ಕೋರಿದ್ದರು.
ವಾದದ ವೇಳೆ ಚಾರ್ಚ್ ಶೀಟ್ ನಲ್ಲಿ ಯಾವುದೇ ನಿಖರ ಮಾಹಿತಿ ಇಲ್ಲ. ಎಲ್ಲವೂ ಸಾಂದರ್ಭಿಕ ಸಾಕ್ಷ್ಯದ ಮೇಲೆ ನಿಂತಿದೆ ಎಂದು ವಾದಿಸಿದ್ದರು.
ಜೋಧಪುರದ ಆಶ್ರಮದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ೧೬ ವರ್ಷದ ಬಾಲಕಿ ಅಸಾರಂ ವಿರುದ್ಧ ದೂರು ನೀಡಿದ್ದರು. ಈ ಹಿಂದೆ ಅಸಾರಂ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ತಿರಸ್ಕರಿಸಿತ್ತು.
Advertisement