ಮಂಡ್ಯ ರೈತನ ಆತ್ಮಹತ್ಯೆ: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು
ಮಂಡ್ಯ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಬಾಕಿ ಕೊಡಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರೈತ ಸಂಘ ಕೊಲೆ ಆರೋಪದ ದೂರು ದಾಖಲಿಸಿದೆ.
ರೈತ ಸಂಘದ ಮುಖಂಡ ಜಿ.ಶಂಕರ್ ಅವರು ಇಂದು ಸಿಎಂ ವಿರುದ್ಧ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಿನ್ನೆ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ, ಅದರೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪಾಂಡವಪುರ ತಾಲೂಕಿನ ಗಾಣದಹೊಸುರು ಗ್ರಾಮದ ರೈತ ನಿಂಗೇಗೌಡ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬಾಕಿ ಪಾವತಿಯಾಗುತ್ತಿಲ್ಲ ಮತ್ತು ಕಬ್ಬು ಬೆಳೆಗಾರರ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ. ಹೀಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ರೈತನ ಕುಟುಂಬಕ್ಕೆ ದೇವೇಗೌಡ, ಬಿಎಸ್‌ವೈ, ಅಂಬರೀಷ್ ಸಾಂತ್ವಾನ
ಕಬ್ಬಿನ ಬಿಲ್ ಬಾಕಿ ಪಾವತಿ ವಿಚಾರವಾಗಿ ರೈತರ ಪ್ರತಿಭಟನೆ, ರಾಜಕೀಯ ಸಂಘರ್ಷ ತಾರಕ್ಕಕ್ಕೆ ಏರಿರುವ ಸಂದರ್ಭದಲ್ಲೇ ಕಬ್ಬು ಬೆಳೆಗಾರ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಎಲ್ಲಾ ಪಕ್ಷಗಳ ಮುಖಂಡರು ಮೃತ ನಿಂಗೇಗೌಡನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಪರವಾಗಿ ವಸತಿ ಸಚಿವ ಅಂಬರೀಷ್ ನಿಂಗೇಗೌಡ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಇದೇ ವೇಳೆ ಮೃತನ ಕುಟುಂಬಕ್ಕೆ 1 ಲಕ್ಷ ರುಪಾಯಿ ಪರಿಹಾರ ಘೋಷಿಸಿದ ಅಂಬರೀಷ್, ಸರ್ಕಾರದ ಪರವಾಗಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ ಹೆಣವಿಟ್ಟು ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ, ಕುಟುಂಬಕ್ಕೆ ಧೈರ್ಯ ತುಂಬಲು ಬಂದಿದ್ದೇನೆ ಎಂದರು.
ಇನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ಮೃತನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ