
ಬೆಂಗಳೂರು: ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಾಖಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರು ದುರುದ್ದೇಶದಿಂದ ಕೂಡಿದ್ದು, ಅದನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ. ಎ.ಎನ್. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಈ ಸಂಬಂಧ ಲೋಕಾಯುಕ್ತಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ವಿವರ:
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಸರ್ವೇ ಸಂ. 251ರ ಹಲಗೆ ವಡೇರಹಳ್ಳಿ, ಸರ್ವೇ ಸಂಖ್ಯೆ 5/1 ಮತ್ತು 6/3ರ ಬಿಳೇಕಹಳ್ಳಿ ಮತ್ತು ಸರ್ವೇ ಸಂಖ್ಯೆ 117ರ ಜೆ.ಬಿ. ಕಾವಲ್‍ನಲ್ಲಿ ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿದ್ದು, ಇದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿದಾರರ ವಾದ
ದೂರುದಾರರಾದ ಜಯಕುಮಾರ್ ಹಿರೇಮಠ್ ಅವರು ಲೋಕಾಯುಕ್ತ ಕಾಯ್ದೆ ಸೆಕ್ಷನ್ 7ರಲ್ಲಿ ದೂರು ದಾಖಲಿಸಿದ್ದಾರೆ. ಒಮ್ಮೆ ದೂರು ದಾಖಲಾದರೆ ಸೆಕ್ಷನ್ 12ರ ಪ್ರಕಾರ ಲೋಕಾಯುಕ್ತ ಪೊಲೀಸರು ದೂರಿಗೆ ಸಂಬಂಧಿಸಿದಂತೆ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಈ ಪ್ರಕರಣದಲ್ಲಿ ರಾಜ್ಯಪಾಲರು ಸಕ್ಷಮ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲಿದ್ದು, ರಾಜ್ಯಪಾಲರಿಗೆ ವರದಿ ನೀಡಬೇಕು. ರಾಜ್ಯಪಾಲರ ಒಪ್ಪಿಗೆ ಪಡೆದ ನಂತರ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡದೆ ನೇರವಾಗಿ ಎಫ್ಐಆರ್ ದಾಖಲಿಸಿರುವುದು ಕಾನೂನುಬಾಹಿರ.
ದೂರುದಾರರು ಸಿಎಜಿ ವರದಿ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಸಿಎಜಿ ವರದಿ ಸದನದ ಸ್ವತ್ತಾಗಿದ್ದು, ಅದರ ಆಧಾರದ ಮೇಲೆ ಖಾಸಗಿ ವ್ಯಕ್ತಿ ದೂರು ನೀಡುವ ಹಾಗಿಲ್ಲ. ಸಿಎಜಿ ನೀಡಿದ ವರದಿಯೇ ಅಂತಿಮವಾಗಿ ಸತ್ಯ ಎಂದು ಹೇಳಲು ಸಹ ಆಗುವುದಿಲ್ಲ. ನಿಯಮದ ಪ್ರಕಾರ ಸಿಎಜಿ ವರದಿ ಆಧಾರದಲ್ಲಿ ದೂರು ದಾಖಲಿಸಬೇಕಾದರೆ ಮೊದಲು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ (ಪಿಎಸಿ) ಸಿಎಜಿ ವರದಿ ನೀಡಬೇಕು. ಪಿಎಸಿ ವರದಿಯನ್ನು ಪರಿಶೀಲಿಸಿದ ನಂತರ ಅದನ್ನು ಸದನದಲ್ಲಿ ಹಾಜರುಪಡಿಸಬೇಕು.
ಪಿಎಸಿ ಮತ್ತು ಸಿಎಜಿ ವರದಿ ಆಧಾರದ ಮೇಲೆ ಸದನದಲ್ಲಿ ಒಪ್ಪಿಗೆ ಪಡೆದ ನಂತರ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸಬೇಕು. ವಾಸ್ತವವಾಗಿ ಬಿಡಿಎ ಮಾಡಿರುವ ನ್ಯೂನತೆಗಳನ್ನು ಸಿಎಜಿ ವರದಿಯಲ್ಲಿ ದಾಖಲಿಸಿದೆ.ಮಾತ್ರವಲ್ಲದೇ ಸಿಎಜಿ ವರದಿಯಲ್ಲಿ 2007-2011ರಲ್ಲಿ ಡಿ-ನೋಟಿಪಿsಕೇಷನ್ ಆಗಿದೆ ಎಂದು ಹೇಳುತ್ತದೆಯೇ ಹೊರತು ಅದರಲ್ಲಿ ಸರ್ಕಾರದಿಂದ ವಂಚನೆ ಮತ್ತು ನ್ಯೂನತೆಗಳಿರುವುದಾಗಿ ವರದಿಯಲ್ಲಿ ಎಲ್ಲಿಯೂ ತಿಳಿಸಿಲ್ಲ.
ವಾಸ್ತವವಾಗಿ 1995-2011ರ ತನಕ ಆಗಿರುವ ಡಿ-ನೋಟಿಫಿಕೇಷನ್‍ಗಳ ವರದಿಯನ್ನು ಸಿಎಜಿ ಹಾಜರುಪಡಿಸಬೇಕು. ಆದರೆ, ಸಿಎಜಿ ಅದನ್ನು ಪರಿಗಣಿಸದೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಗಿದ್ದ ಡಿ-ನೋಟಿಫಿಕೇಶನ್ ಮಾತ್ರ ಪರಿಗಣಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಒಟ್ಟು 126 ಡಿ-ನೋಟಿಫಿಕೇಷನ್ ಮಾಡಲಾಗಿದ್ದು, ಅದರಲ್ಲಿ ಸಿಎಜಿ ಕೇವಲ ಶೇ.40ರಷ್ಟನ್ನು ಮಾತ್ರ ಪರಿಗಣಿಸಿದೆ. ಸಿಎಜಿ ವರದಿಯೂ ಸಹ ದುರುದ್ದೇಶದಿಂದ ಕೂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಸಿ.ವಿ. ನಾಗೇಶ್ ಮತ್ತು ಸಂದೀಪ್ ಪಾಟೀಲ್ ವಾದ ಮಂಡಿಸಿದರು.
Advertisement