ಲೋಕಾದ ಬಯಲೊಳಗೆ ಲಂಚ ಕಲಹ ಪರ್ವ

ಭ್ರಷ್ಟಾಚಾರ ನಿರ್ಮೂಲನೆ ಹೆಸರಿನ ಸಂಸ್ಥೆಯಲ್ಲಿದ್ದುಕೊಂಡೇ ಅಧಿಕಾರಿಗಳ ಬಳಿ ಕೋಟಿ ಕೋಟಿ ಡಿಮ್ಯಾಂಡ್ ಮಾಡುವ ಲೋಕಾಯುಕ್ತ ಸಂಸ್ಥೆಯೊಳಗೆ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್ ಹಾಗೂ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ನಡುವಿನ ಕಲಹ ತಾರಕಕ್ಕೇರಿದೆ...
ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್
ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್
Updated on

ಬೆಂಗಳೂರು: ಭ್ರಷ್ಟಾಚಾರ ನಿರ್ಮೂಲನೆ ಹೆಸರಿನ ಸಂಸ್ಥೆಯಲ್ಲಿದ್ದುಕೊಂಡೇ ಅಧಿಕಾರಿಗಳ ಬಳಿ ಕೋಟಿ ಕೋಟಿ ಡಿಮ್ಯಾಂಡ್ ಮಾಡುವ ಲೋಕಾಯುಕ್ತ ಸಂಸ್ಥೆಯೊಳಗೆ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್ ಹಾಗೂ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ನಡುವಿನ ಕಲಹ ತಾರಕಕ್ಕೇರಿದೆ.

ಒಂದು ಕೋಟಿ ಲಂಚ ಆರೋಪದ ಬಗ್ಗೆ ಒಂದೂವರೆ ದಿನ ತನಿಖೆ ನಡೆಸಿದ ಅಧಿಕಾರಿಗಳು ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಸಮೀಪದ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ, ಭ್ರಷ್ಟಾಚಾರ ಆರೋಪದ ಸುಳಿ ಯಾವಾಗ ಬೇಕಾದರೂ ನ್ಯಾ.ವೈ.ಭಾಸ್ಕರ್ ರಾವ್ ಅವರನ್ನು ಸುತ್ತಿಕೊಳ್ಳಬಹುದು ಎನ್ನುವುದು ಬಹುತೇಕ ಖಚಿತವಾಗಿದೆ.

ಹೊಸ ನಿದರ್ಶನಗಳು
`ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ತನಿಖೆಯನ್ನು ಕೆಳಗಿನ ಸಂಸ್ಥೆಯಾದ ಸಿಸಿಬಿಗೆ ವಹಿಸುತ್ತೇವೆ ಎಂದು ಹೇಳಲಿಲ್ಲ. ಬದಲಿಗೆ ಪ್ರಕರಣವನ್ನು ಬೇರೆ ಸಂಸ್ಥೆಗೆ ವಹಿಸುತ್ತಿರುವುದಾಗಿಯಷ್ಟೇ ಹೇಳಿದ್ದರು. ಅವರ ಈ ನಿರ್ಧಾರ ಸರಿಯಲ್ಲ' ಎಂದು ನ್ಯಾ.ವೈ. ಭಾಸ್ಕರ್ ರಾವ್ ಅವರ ವಿರುದ್ಧ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಲೋಕಾಯುಕ್ತದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರು ಒಟ್ಟಾಗಿ ಕೆಲಸ ಮಾಡಿದರೆ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ಆದರೆ, ಇಬ್ಬರು ವಿಭಿನ್ನ ನಿಲುವುಗಳನ್ನು ಹೊಂದಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಾಗ ಒಬ್ಬರನ್ನೊಬ್ಬರು ಸಂಪರ್ಕಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದ್ದಾರೆ.

ಲೋಕಾಯುಕ್ತರ ನಡುವೆಯೇ ಸಮನ್ವಯ ಕೊರತೆ ಕಾರಣ ಭ್ರಷ್ಟ ವ್ಯವಸ್ಥೆಯಿಂದ ನೊಂದವರು ಲೋಕಾಯುಕ್ತ ಸಂಸ್ಥೆಯಿಂದ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಳಿ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ಹೆಸರು ಹೇಳಿಕೊಂಡು ಕೃಷ್ಣರಾವ್ ಎಂಬ ವ್ಯಕ್ತಿ ರು.1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣವನ್ನು ನ್ಯಾ.ಭಾಸ್ಕರ್ ರಾವ್ ಅವರು ಶುಕ್ರವಾರ (ಜೂ.26) ಸಿಸಿಬಿಗೆ ವಹಿಸಿದ್ದರು.

ಸಂಸ್ಥೆಯ ಹೆಸರಿನಲ್ಲಿ ಭ್ರಷ್ಟಾಚಾರದ ಬಗ್ಗೆ ಸೋನಿಯಾ ನಾರಂಗ್ ಅವರು ಪತ್ರ ಬರೆದು 6 ವಾರ ಕಳೆದರೂ ನ್ಯಾ.ವೈ.ಭಾಸ್ಕರ್‍ರಾವ್ ಅವರುಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿಲ್ಲ. ಈ ಮೂಲಕ ಅವರು ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎನ್ನುವ ಅನುಮಾನ ಉಂಟಾಯಿತು.

ಈ ನಡುವೆ ತಮ್ಮ ಅಧಿಕಾರಿ ವ್ಯಾಪ್ತಿಗೆ ಬಾರದ ವಿಚಾರವನ್ನು ಕೈಗೆತ್ತಿಕೊಂಡು ನ್ಯಾ. ಸುಭಾಷ್ ಬಿ.ಅಡಿ ಅವರು ಸಂಸ್ಥೆಯೊಳಗಿನ ಭ್ರಷ್ಟಾಚಾರ ಪ್ರಕರಣವನ್ನು ತನಿಖೆಗಾಗಿ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ವಹಿಸಿದ್ದರು. ತಮ್ಮೊಂದಿಗೆ ಚರ್ಚೆ ನಡೆಸದೆ ತಮ್ಮ ವ್ಯಾಪ್ತಿಗೂ ಮೀರಿದ ಪ್ರಕರಣವನ್ನು ಎಸ್ಪಿ ಸೋನಿಯಾ ನಾರಂಗ್ ಅವರಿಗೆವಹಿಸಿರುವುದು ನ್ಯಾ. ವೈ.ಭಾಸ್ಕರ್ ರಾವ್ ಅವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಐಜಿಗೆ ವಹಿಸಿದ್ದು ತಿಳಿಸಿಲ್ಲವೇಕೆ?
ರು.1 ಕೋಟಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಐಜಿಪಿಗೆ ವಹಿಸಿದ್ದಾಗಿ ನ್ಯಾ.ಭಾಸ್ಕರ್ ರಾವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ, ಪ್ರಕರಣದ ತನಿಖೆಗೆ ಆದೇಶಿಸಿದ ದಿನವೇ ಈ ವಿಚಾರವನ್ನು ಅವರು ಮಾಧ್ಯಮಗಳ ಗಮನಕ್ಕೆ ತಂದಿಲ್ಲ. ಇದುವರೆಗೆ ಈ ಕುರಿತು ತನಿಖೆ ನಡೆದೇ ಇಲ್ಲ ಎನ್ನುವುದು ತಿಳಿದು ಬಂದಿದೆ. ತನಿಖೆಗೆ ಆದೇಶಿಸಿದ ವಿಚಾರಗಳನ್ನು ಮಾಧ್ಯಮಗಳಿಗೆ ಈ ಮೇಲ್ ಮೂಲಕ ಕಳುಹಿಸುತ್ತಿದ್ದ ನ್ಯಾ. ವೈ.ಭಾಸ್ಕರ್ ರಾವ್ ಈ ವಿಷಯದಲ್ಲೇಕೆ ಸುಮ್ಮನಿದ್ದರು? ಅವರ ನಡೆ ಇಂಥ ಹಲವಾರು ಅನುಮಾನಗಳನ್ನು ತಂದಿದೆ.

ಪ್ರಕರಣದ ತನಿಖೆಗೆ ಹಿಂದೇಟು?
ಲೋಕಾಯುಕ್ತ ಸಂಸ್ಥೆಯ ಲಂಚ ಪ್ರಕರಣವನ್ನು ತನಿಖೆ ನಡೆಸಲು ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಹಿಂದೇಟು ಹಾಕಿದ್ದಾರೆ.

ಈ ಬಗ್ಗೆ ಲೋಕಾಯುಕ್ತರಿಗೆ ಪತ್ರ ಬರೆದಿರುವ ಚಂದ್ರಶೇಖರ್, ಪ್ರಕರಣದ ತನಿಖೆ ನಡೆಸಲು ಸಿದ್ದ. ಆದರೆ, ಪ್ರಕರಣ ವರ್ಗಾಯಿಸಿರುವುದನ್ನು ಇನ್ನೊಮ್ಮೆ ಪರಿಶೀಲನೆ ನಡೆಸಿ ಎಂದು ಕೋರಿದ್ದಾರೆ. ತಮ್ಮ ಮಾವ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಾಮಾಂಜನೇಯ ಅವರ ವಿರುದ್ಧ ಭ್ರಷ್ಟಾಚಾರ ಆರೋಪವಿದೆ. ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.

ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹೀಗಾಗಿ, ಅವರು ನಮಗೆ ಆಪ್ತರಾಗಿರುವುದರಿಂದ ಸೂಕ್ಷ್ಮ ಪ್ರಕರಣದಲ್ಲಿ ನಮ್ಮ ವಿರುದ್ಧವೂ ಆರೋಪಗಳು ಕೇಳಿ ಬರಬಹುದು. ಹೀಗಾಗಿ, ಪ್ರಕರಣದ ತನಿಖೆಗೆ ಬಗ್ಗೆ ಮರುಪರಿಶೀಲನೆ ನಡೆಸಿ ನಿರ್ಧಾರ ತಿಳಿಸಿ ಎಂದು ಕೋರಿದ್ದಾರೆ. ಶನಿವಾರ ಸಂಜೆ ಲೋಕಾಯುಕ್ತ ಸಂಸ್ಥೆಯಿಂದ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳು ಕೈ ತಲುಪಿವೆ. ಆದರೆ, ಲೋಕಾಯುಕ್ತರಿಂದ ಉತ್ತರ ಬರುವವರೆಗೂ ತನಿಖೆ ನಡೆಸುವುದಿಲ್ಲ ಎಂದು ಚಂದ್ರಶೇಖರ್ ಅವರುಪತ್ರದಲ್ಲಿ ವಿವರಿಸಿದ್ದಾರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com