
ಬೆಂಗಳೂರು: ಲೋಕಾಯುಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಡುವ ವ್ಯವಸ್ಥಿತ ಜಾಲ ಸುಮಾರು 1 ವರ್ಷದಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ.
ಲೋಕಾಯುಕ್ತ ಸಂಸ್ಥೆಯೊಳಗೆ ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ಬಗ್ಗೆ ಕೇವಲ ಒಂದುವರೆ ದಿನ ತನಿಖೆ ನಡೆಸಿದ ತನಿಖಾ ತಂಡ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿತ್ತು. ಅದರಲ್ಲಿ ಸಾಕಷ್ಟು ಪ್ರಗತಿಯಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಮಹತ್ವದ ಮಾಹಿತಿ ಸಂಗ್ರಹಿಸುವ ಹಂತಕ್ಕೆ ತನಿಖೆ ಬಂದಿತ್ತು. ಅಷ್ಟರಲ್ಲೇ ಪ್ರಕರಣ ವರ್ಗಾವಣೆಯಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಾಲ್ ಡಿಟೇಲ್ ರೆಕಾರ್ಡ್(ಸಿಡಿಆರ್) ಮಾಹಿತಿ ಆಧಾರಿಸಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ರು.1 ಕೋಟಿಗೆ ಬೇಡಿಕೆ ಇಟ್ಟ ಕೃಷ್ಣರಾವ್ ಮಾತ್ರವಲ್ಲದೇ ಆತನೊಂದಿಗೆ ಏಳೆಂಟುಮಂದಿ ಲೋಕಾಯುಕ್ತ ಹೆಸರಿನಲ್ಲಿ ಸುಲಿಗೆಗೆ ಇಳಿದಿದ್ದರು ಎನ್ನುವುದನ್ನು ಪತ್ತೆ ಮಾಡಿದ್ದರು. ಈ ಪೈಕಿ ಕೆಲವರು ಸಂಸ್ಥೆಯೊಳಗೆ ಕರ್ತವ್ಯ ನಿರ್ವಹಿಸುವವರೇ. ಈ ಎರಡೂ ತಂಡಗಳು ಸೇರಿ ಅಧಿಕಾರಿಗಳ ಬಳಿ ಲಕ್ಷದಿಂದ ಕೋಟಿವರೆಗೆ ಡಿಮ್ಯಾಂಡ್ ಮಾಡುತ್ತಿದ್ದರು. ಈ ವ್ಯಕ್ತಿಗಳು ಹಲವು ಅಧಿಕಾರಿಗಳೊಂದಿಗೆ ಫೋನ್ ಮೂಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಸಂಪರ್ಕದಲ್ಲಿರುವ ಮಾಹಿತಿ ಲಭ್ಯವಾಗಿತ್ತು.
ಹಲವು ಅಧಿಕಾರಿಗಳು ಮಾತ್ರವಲ್ಲದೇ ಒಬ್ಬ ರಾಜಕಾರಣಿಯ ಬಳಿಯೂ ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಆದರೆ, ರಾಜಕಾರಣಿ ಅಥವಾ ಅಧಿಕಾರಿ ಸೇರಿದಂತೆ ಯಾರೊಬ್ಬರು ಕೂಡಾ ಈ ಬಗ್ಗೆ ಲಿಖಿತ ಹೇಳಿಕೆ ನೀಡಲು ನಿರಾಕರಿಸಿದ್ದರು ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಸಮೀಪದ ವ್ಯಕ್ತಿಯು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಆದರೆ, ಅವರ ಪುತ್ರನ ಪಾತ್ರದ ಬಗ್ಗೆ ಇನ್ನಷ್ಟು ತನಿಖೆಯ ನಂತರ ಹೆಚ್ಚಿನ ಮಾಹಿತಿ ಸಿಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
Advertisement