ಕೆಪಿಟಿಸಿಎಲ್ ಆನ್‌ಲೈನ್ ಪರೀಕ್ಷೆಗೆ ತಾಂತ್ರಿಕ ಸಮಸ್ಯೆ

ಕೆಪಿಟಿಸಿಎಲ್ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಭಾನುವಾರ ನಡೆದ ಆನ್‌ಲೈನ್ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಒಂದು ಕೇಂದ್ರದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಪಿಟಿಸಿಎಲ್ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಭಾನುವಾರ ನಡೆದ ಆನ್‌ಲೈನ್ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಒಂದು ಕೇಂದ್ರದ ಅಭ್ಯರ್ಥಿಗಳು ದಿನವೀಡಿ ಪರದಾಡಿದ ಪ್ರಸಂಗ ನಡೆಯಿತು.

ಇಲ್ಲಿನ ರುಸ್ತುಂಬಾಗ್ ರಸ್ತೆಯ ಪರೀಕ್ಷೆ ಕೇಂದ್ರ(ಹಳೆ ವಿಮಾನ ನಿಲ್ದಾಣ ರಸ್ತೆ)ದಲ್ಲಿ ಬೆಳಗ್ಗೆ ಪರೀಕ್ಷೆ ಆರಂಭವಾಯಿತಾದರೂ ಅದು ಪೂರ್ಣಗೊಳ್ಳಲೇ ಇಲ್ಲ. ಬೆಳಗ್ಗೆ 10 ಗಂಟೆಗೆ ಕೇಂದ್ರದೊಳಗೆ ಪ್ರವೇಶಿಸಿದ್ದ ಅಭ್ಯರ್ಥಿಗಳು ಸಂಜೆಯಾದರೂ ಹೊರಗೇ ಬರಲೇ ಇಲ್ಲ. ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಬೆಳಗ್ಗೆ 10ರಿಂದ ಮಧ್ಯಾಹ್ನದವರೆಗೆ ನಡೆಯಬೇಕಿದ್ದ ಒಂದು ಬ್ಯಾಚ್ ಪರೀಕ್ಷೆ ಪೂರ್ಣಗೊಳ್ಳಲಿಲ್ಲ.

ಮನವೊಲಿಕೆ ಯತ್ನ: ಇದೇ ವೇಳೆ ಮಧ್ಯಾಹ್ನ 3ರಿಂದ ಆರಂಭವಾಗಬೇಕಿದ್ದ ಎರಡನೇ ಬ್ಯಾಚ್‌ನ ಅಭ್ಯರ್ಥಿಗಳು ಅಲ್ಲಿ ಜಮಾಯಿಸಿದರು. ತಾಂತ್ರಿಕ ಸಮಸ್ಯೆ ಇದೆ, ಸ್ವಲ್ಪ ಕಾಯಿರಿ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಪದೇ ಪದೇ ಮನವೊಲಿಸುವ ಪ್ರಯತ್ನ ಮಾಡಿದರೂ ಪರೀಕ್ಷೆ ಆರಂಭವಾಗುವ ಯಾವುದೇ ಸೂಚನೆಯೂ ಸಿಗಲಿಲ್ಲ.

ಮಧ್ಯಾಹ್ನ 4.30ರ ವೇಳೆಗೆ ಇಂದಿರಾನಗರದ ಪರೀಕ್ಷಾ ಕೇಂದ್ರಕ್ಕೆ ಇಲ್ಲಿನ ಅಭ್ಯರ್ಥಿಗಳನ್ನು ಕರೆದೊಯ್ಯುವ ಕಾರ್ಯ ನಡೆಯಿತಾದರೂ ಬೇರೇ ಬೇರೆ ಊರುಗಳಿಂದ ಆಗಮಿಸಿದ್ದ ಅಭ್ಯರ್ಥಿಗಳು ಇದಕ್ಕೊಪ್ಪಲಿಲ್ಲ. ಈ ಕೇಂದ್ರದಿಂದ ಒಂದು ತಾಸು ಪ್ರಯಾಣ ಮಾಡಿ, ಎರಡೂವರೆ ಗಂಟೆ ಪರೀಕ್ಷೆ ಮುಗಿಸಿ ಊರು ತಲುಪುವುದು ಯಾವಾಗ ಎಂದು ಪ್ರಶ್ಮಿಸಿ, ಅಸಮಾಧಾನ ವ್ಯಕ್ತಪಡಿಸಿದರು. ಕೆಲವೇ ವಿದ್ಯಾರ್ಥಿಗಳು ಕೆಪಿಟಿಸಿಎಲ್‌ನ ಬಸ್ ವ್ಯವಸ್ಥೆಯಲ್ಲಿ ಬೇರೆ ಕೇಂದ್ರಕ್ಕೆ ತೆರಳಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯಪ್ರವೇಶವೂ ಆಯಿತು.

ನಡೆಯದ ಪರೀಕ್ಷೆ: ಅಂತಿಮವಾಗಿ ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಕೇಂದ್ರದಲ್ಲಿ ಪರೀಕ್ಷೆ ಎದುರಿಸಬೇಕಾಗಿದ್ದವರಿಗೆ ಇನ್ನೊಂದು ನಿಗದಿಪಡಿಸಿದ ದಿನದಂದು ನಡೆಸಲಾಗುವುದು ಮತ್ತು ಈ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com