ಬಿಬಿಎಂಪಿ ಚುನಾವಣೆ ಮುಂದೂಡಿಕೆ: ಜು.3ಕ್ಕೆ ಸುಪ್ರೀಂನಲ್ಲಿ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯನ್ನು ಹೇಗಾದರೂ ಸರಿ ಮುಂದೂಡಲೇಬೇಕೆಂಬ ಹಠಕ್ಕೆ ಬಿದ್ದು ರಾಜ್ಯ ಸರ್ಕಾರ ಸುಪ್ರೀಂ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯನ್ನು ಹೇಗಾದರೂ ಸರಿ ಮುಂದೂಡಲೇಬೇಕೆಂಬ ಹಠಕ್ಕೆ ಬಿದ್ದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಜುಲೈ 3ರಂದು ನಡೆಯಲಿದೆ.

ಪ್ರಸ್ತುತ 2001ರ ಜನಗಣತಿ ಪ್ರಕಾರ ಮೀಸಲು ನಿಗದಿ ಮಾಡಲಾಗಿದೆ. ಆದರೆ 2011ರ ಜನಗಣತಿಯಂತೆ ಮೀಸಲು ನಿಗದಿ ಮಾಡಿ ಚುನಾವಣೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಸೋಮವಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಜುಲೈ 3ರಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.

ಮೇ 5 ರಂದು ಸ್ವತಃ ಸುಪ್ರೀಂಕೋರ್ಟ್ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಆ ಆದೇಶದಂತೆ ರಾಜ್ಯ ಸರ್ಕಾರ ಈಗ 2001ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸುತ್ತಿದೆ. 2011ನೇ ಸಾಲಿನ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡದೇ ಇದ್ದರೆ ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಪ್ರಾತಿನಿಧ್ಯ ಕಡಮೆಯಾಗಲಿದ್ದು, ಆ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ದಕ್ಕುವುದಿಲ್ಲ.

ಆದ್ದರಿಂದ, 2001ರ ಸಾಲಿನ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಿರುವುದರಿಂದ ಅದನ್ನು ಕೈಬಿಟ್ಟು, 2011ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com