ನಿರ್ಭಯ ರೇಪ್ ಸಂತ್ರಸ್ತಳನ್ನೇ ದೂಷಿಸಿದ ಅತ್ಯಾಚಾರಿ

೨೦೧೨ರ ದೆಹಲಿಯ ಬಸ್ ಗ್ಯಾಂಗ್ ರೇಪ್ ಮತ್ತು ಕೊಲೆಯ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಮುಕೇಶ್ ಸಿಂಗ್ ರೇಪ್ ಸಂತ್ರಸ್ತಳನ್ನೇ ದೂಷಿಸಿ
ನಿರ್ಭಯ ರೇಪ್ ವಿರುದ್ಧದ ಪ್ರತಿಭಟನೆಯ ಸಂಗ್ರಹ ಚಿತ್ರ
ನಿರ್ಭಯ ರೇಪ್ ವಿರುದ್ಧದ ಪ್ರತಿಭಟನೆಯ ಸಂಗ್ರಹ ಚಿತ್ರ
Updated on

ನವದೆಹಲಿ: ೨೦೧೨ರ ದೆಹಲಿಯ ಬಸ್ ಗ್ಯಾಂಗ್ ರೇಪ್ ಮತ್ತು ಕೊಲೆಯ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಮುಕೇಶ್ ಸಿಂಗ್ ರೇಪ್ ಸಂತ್ರಸ್ತಳನ್ನೇ ದೂಷಿಸಿ ಮತ್ತೆ ಜನರನ್ನು ಆಕ್ರೋಶಕ್ಕೆ ಗುರಿಮಾಡಿದ್ದಾನೆ.

ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಜೈಲಿನಿಂದಲೇ ನೀಡಿದ ಸಂದರ್ಶನದಲ್ಲಿ ಮುಕೇಶ್ ಸಿಂಗ್, ಲೈಂಗಿಕ ಕಿರುಕುಳ ನೀಡುವ ಮಂದಿಯನ್ನು ಆಕರ್ಷಿಸುವ, ರಾತ್ರಿ ಸಮಯದಲ್ಲಿ ಓಡಾಡುವ ಮಹಿಳೆಯರದ್ದೇ ತಪ್ಪು ಎಂದಿರುವುದಲ್ಲದೆ "ರೇಪ್ ಗೆ ಹುಡುಗನಿಗಿಂತ ಹುಡುಗಿಯೇ ಹೆಚ್ಚು ಜವಾಬ್ದಾರಿ" ಎಂದಿದ್ದಾನೆ.

ಸಿನೆಮಾ ನೋಡಿ ತಮ್ಮ ಗೆಳೆಯನೊಂದಿಗೆ ಹಿಂದಿರುಗುತ್ತಿದ್ದ ಜ್ಯೋತಿ ಸಿಂಗ್(೨೩) ಅವರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ೬ ಜನರ ಗುಂಪೊಂದು ಅಪಹರಿಸಿತ್ತು. ಅವರನ್ನು ರೇಪ್ ಮಾಡಿ ಕಬ್ಬಿಣದ ಸಲಾಕೆಯಿಂದ ಥಳಿಸಿ ಕೊಲೆ ಮಾಡಲಾಗಿತ್ತು. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾಗಿದ್ದವು.

ಜ್ಯೋತಿ ಮತ್ತು ಅವಳ ಗೆಳೆಯ ನಮ್ಮ ವಿರುದ್ಧ ಸೆಣಸದೆ ಹೋಗಿದ್ದರೆ ನಾವು ಅವರಿಗೆ ಹೊಡೆಯುತ್ತಿರಲಿಲ್ಲ ಎಂದು ಕೂಡ ಮುಕೇಶ್ ತಿಳಿಸಿದ್ದಾನೆ. ಈ ಕೊಲೆಯನ್ನು "ಆಕಸ್ಮಿಕ" ಎಂದಿರುವ ಅವನು "ನಾವು ರೇಪ್ ಮಾಡುವಾಗ ಅವರು ತಿರುಗಿ ಬೀಳಬಾರದಿತ್ತು. ಮೌನವಾಗಿದ್ದು ನಮಗೆ ರೇಪ್ ಮಾಡಲು ಅವಕಾಶ ನೀಡಬೇಕಿತ್ತು. ನಂತರ ಹುಡುಗನಿಗೆ ಮಾತ್ರ ಹೊಡೆದು ಅವರನ್ನು ನಾವು ಬಿಟ್ಟುಬಿಡುತ್ತಿದ್ದೆವು" ಎಂದು ಕೂಡ ಹೇಳಿದ್ದಾನೆ.

ಈ ಬಿಬಿಸಿ ಸಂದರ್ಶನ, ಮಹಿಳಾ ಅಂತರಾಷ್ಟ್ರೀಯ ದಿನವಾದ ಮಾರ್ಚ್ ೮ ಭಾನುವಾರ ಪ್ರಸಾರವಾಗಲಿದೆ.

ಈ ರೇಪಿಸ್ಟ್ ಗಳಿಗೆ ಭಾರತೀಯ ನ್ಯಾಯಾಲಯ ಗರಿಷ್ಟ ಗಲ್ಲು ಶಿಕ್ಷೆ ನೀಡಿದ್ದರೂ, ಸಮಾಜದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡಿಲ್ಲ ಎನ್ನುವುದು ಮಹಿಳಾ ಕಾರ್ಯಕರ್ತರ ಆಕ್ರೋಶ.

ಸ್ಲಂ ನಿವಾಸಿ ಸಿಂಗ್ ಈ ರೇಪ್ ಮತ್ತು ಕೊಲೆ ಮಾಡಿದಾಗ ಅವನಿಗೆ ೨೬ ವಯಸ್ಸು. ಮೊದಲಿಗೆ ಈ ರೇಪ್ ಮತ್ತು ಹತ್ಯೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಅವನು ಹೇಳಿಕೊಂಡಿದ್ದರೂ, ಡಿ ಏನ್ ಎ ಪರೀಕ್ಷೆಯ ನಂತರ ಆರೋಪ ಸಾಬೀತಾಗಿತ್ತು.

ಈ ಶಿಕ್ಷೆಯ ನಂತರವೂ ಮುಕೇಶ್ ಸಿಂಗ್ ನಲ್ಲಿ ಯಾವುದೇ ಪಾಪಪ್ರಜ್ಞೆ ಕಾಡಿದ ಹಾಗೆ ಕಂಡು ಬಂದಿಲ್ಲ. "ಒಂದೆ ಕೈನಿಂದ ಚಪ್ಪಾಳೆ ಸಾಧ್ಯವಿಲ್ಲ" ಎಂದಿರುವ ಸಿಂಗ್, "೯ ಘಂಟೆ ರಾತ್ರಿಯಲ್ಲಿ ಒಳ್ಳೆಯ ಹುಡುಗಿಯರು ನಡೆದಾಡುವುದಿಲ್ಲ. ರೇಪ್ ಗೆ ಹುಡುಗನಿಗಿಂತ ಹುಡುಗಿಯೇ ಹೆಚ್ಚು ಜವಾಬ್ದಾರಿ" ಎಂದಿದ್ದಾನೆ.

"ಹುಡುಗಿಯರು ಮನೆಗೆಲಸ ಮಾಡಬೇಕು ರಾತ್ರಿಯಲ್ಲಿ ಡಿಸ್ಕೋ ಮತ್ತು ಬಾರ್ ಗಳಲ್ಲಿ ಸುತ್ತುವುದು ಸರಿಯಲ್ಲ. ಬರಿ ೨೦% ಹುಡುಗಿಯರು ಮಾತ್ರ ಒಳ್ಳೆಯವರು" ಎಂದಿದ್ದಾನೆ.

ಗಲ್ಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಸಿಂಗ್ ತನ್ನನ್ನು ಗಲ್ಲು ಶಿಕ್ಷೆಗೆ ಹಾಕುವುದರಿಂದ ರೇಪ್ ಸಂತ್ರಸ್ತರಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂದಿದ್ದಾನೆ. "ಗಲ್ಲು ಶಿಕ್ಷೆ ನೀಡುವುದರಿಮ್ದ ಹುಡುಗಿಯರಿಗೆ ಹೆಚ್ಚಿನ ತೊಂದರೆಯಾಗಲಿದೆ. ಈ ಹಿಂದೆ ರೇಪ್ ಮಾಡಿ ಅವಳು ಯಾರಿಗೂ ಹೇಳುವುದಿಲ್ಲ ಎಂದು ಬಿಟ್ಟುಬಿಡುತ್ತಿದ್ದರು. ಆದರೆ ಇನ್ನು ಮುಂದೆ ರೇಪ್ ಮಾಡಿ ಹುಡುಗಿಯನ್ನು ಸಾಯಿಸಿಬಿಡುತ್ತಾರೆ" ಎಂದಿದ್ದಾನೆ.

ಕೃಪೆ: ದ ಡೈಲಿ ಟೆಲಿಗ್ರಾಫ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com