ನವದೆಹಲಿ: ದೇಶವನ್ನು ಬೆಚ್ಚಿ ಬೀಳಿಸಿದ ೨೦೧೨ ರ ಭೀಕರ ನಿರ್ಭಯ ಗ್ಯಾಂಗ್ ರೇಪ್ ಅಪರಾಧಿ ಜೊತೆ ಖಾಸಗಿ ಚಾನೆಲ್ ನಡೆಸಿದ ಸಂದರ್ಶನದ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಸಮಧಾನ ತೋರಿದ್ದು, ತಿಹಾರ ಜೈಲಿನ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಗೃಹ ಸಚಿವರ ನಿರ್ದೇಶನದಂತೆ ಈ ಪ್ರಕರಣದಲ್ಲಿ ದೆಹಲಿ ಪೋಲಿಸರು ಎಫ್ ಐ ಆರ್ ಕೂಡ ದಾಖಲಿಸಿದ್ದಾರೆ.
ಬ್ರಿಟಿಶ್ ಫಿಲ್ಮ್ ನಿರ್ದೇಶಕ ಲೆಸ್ಲೀ ಅಡ್ವಿನ್ ಅವರು ನಿರ್ದೇಶಿಸುತ್ತಿರುವ 'ಇಂಡಿಯಾಸ್ ಡಾಃಟರ್' (ಭಾರತದ ಮಗಳು) ಸಾಕ್ಷ್ಯಚಿತ್ರದ ಭಾಗವಾಗಲಿದೆ ಈ ಸಂದರ್ಶನ.
"ಈ ಸಂದರ್ಶನದ ಪ್ರಸಾರದ ವಿರುದ್ಧ ನಾವು ನ್ಯಾಯಾಲಯಕ್ಕೆ ಹೋಗಲಿದ್ದೇವೆ. ಇಲ್ಲಿ ಕಾನೂನನ್ನು ಬದಿಗಿರಿಸಿ ಅಪರಾಧ ಎಸಗಲಾಗಿದೆ. ಇದರ ತನಿಖೆ ನಡೆಸಲಾಗುವುದು" ಎಂದು ದೆಹಲಿಯ ಪೊಲೀಸ್ ಮಹಾನಿರ್ದೇಶಕ ಬಿ ಎಸ್ ಬಸ್ಸಿ ತಿಳಿಸಿದ್ದಾರೆ.
ಯಾರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ "ಮಾಧ್ಯಮಗಳ ವರದಿಯ ಪ್ರಕಾರ ಎಫ್ ಐ ಆರ್ ದಾಖಲಿಸಿದ್ದೇವೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ" ಎಂದಿದ್ದಾರೆ ಬಸ್ಸಿ.
ಈ ಸಂದರ್ಶನ ಒಳಗೊಂಡ ಸಾಕ್ಷ್ಯಚಿತ್ರ ಮಾರ್ಚ್ ೮ರಂದು (ಮಹಿಳಾ ದಿನಾಚರಣೆ) ಬಿಬಿಸಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಂದರ್ಶನದಲ್ಲಿ ರೇಪ್ ಅಪರಾಧಿ, ಯಾವುದೇ ಪಾಪಪ್ರಜ್ಞೆ ತೋರದೆ ರೇಪ್ ಸಂತ್ರಸ್ತಳದ್ದೇ ತಪ್ಪು ಎಂದು ದೂರಿದ್ದು ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.
Advertisement