
ನವದೆಹಲಿ: ರಾಜಕೀಯ ವ್ಯವಹಾರಗಳ ಸಮಿತಿಯಿಂದ(ಪಿಎಸಿ) ಆಪ್ ಪಕ್ಷದ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಹೊರಹಾಕಿದ ವಿಷಯವನ್ನು ಮಾರ್ಚ್ ನಲ್ಲಿ ನಡೆಯುವ ಎಎಪಿ ಪಕ್ಷದ ರಾಷ್ಟೀಯ ಮಂಡಲಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
೩೦೦ ಸದಸ್ಯರಿರುವ ರಾಷ್ಟೀಯ ಮಂಡಲಿ ವರ್ಷಕ್ಕೆ ಒಮ್ಮೆ ಸಭೆ ಸೇರುತ್ತದೆ. ಈ ವರ್ಷ ಈ ಸಭೆ ಮಾರ್ಚ್ ೨೮ ರಂದು ಜರುಗಲಿದೆ.
"ಭೂಷಣ್ ಮತ್ತು ಯೋಗೇಂದ್ರ ಅವರನ್ನು ಪಿಎಸಿಯಿಂದ ಹೊರಹಾಕಿದ ವಿಷಯವು ಸೇರಿದಂತೆ ಹಲವಾರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಹಲವಾರು ಆಡಳಿತಾತ್ಮಕ ವಿಷಯಗಳು ಕೂಡ ಸಭೆಯಲ್ಲಿ ಚರ್ಚೆಯಾಗಲಿವೆ. ಬೆಂಗಳೂರಿನಿಂದ ಅರವಿಂದ ಕೇಜ್ರಿವಾಲ್ ಹಿಂದಿರುಗಿದ ಮೇಲೆ ಸಭೆಯ ಚರ್ಚಾ ವಿಷಯಗಳ ಮೇಲೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ" ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ಚಿಕಿತ್ಸೆ ಪಡೆಯಲು ೧೦ ದಿನದ ರಜೆ ಪಡೆದು ಬೆಂಗಳೂರಿನ ನ್ಯಾಚುರೋಪತಿ ಚಿಕಿತ್ಸೆಗೆ ಅರವಿಂದ್ ಕೇಜ್ರಿವಾಲ್ ಬಂದಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ, ರಾಜಕೀಯ ವ್ಯವಹಾರಗಳ ಸಮಿತಿಯ ನಂತರ ರಾಷ್ಟ್ರೀಯ ಮಂಡಲಿ ಪಕ್ಷದಲ್ಲಿ ಹೆಚ್ಚು ಅಧಿಕಾರ ಹೊಂದಿರುವ ಸಮಿತಿ.
ಕಳೆದ ರಾಷ್ಟೀಯ ಮಂಡಲಿ ಸಭೆಯಲ್ಲಿ ಮಾಜಿ ಮಂತ್ರಿ ಸೋಮನಾಥ್ ಭಾರತಿ ಮಧ್ಯರಾತ್ರಿ ನಡೆಸಿದ ದಾಳಿಯ ಮೇಲೆ ಬಿಸಿ ಚರ್ಚೆ ನಡೆದಿತ್ತು.
Advertisement