
ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಕೂಗು ಬಲವಾಗುತ್ತಿದ್ದು, ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಸಭೆ ಕರೆದಿದ್ದಾರೆ.
ನಾಳೆ ಬೆಳಗ್ಗೆ 10.30ಕ್ಕೆ ವಿಧಾನಸೌಧದ ಕ್ಯಾಬಿನೆಟ್‌ಹಾಲ್‌ನಲ್ಲಿ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಸಭೆ ನಡೆಯಲಿದ್ದು, ಸಭೆಯಲ್ಲಿ ರವಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಕುರಿತು ಸಂಪುಟ ದರ್ಜೆ ಹಾಗೂ ರಾಜ್ಯಸ್ಥಾನಮಾನದ ಸಚಿವರೊಂದಿಗೆ ಸಿಎಂ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಸಿಐಡಿ ನೀಡುವ ಮಧ್ಯಂತರ ವರದಿಯ ಬಗ್ಗೆಯೂ ಈ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ.
ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಹಾಗೂ ಹಲವಾರು ಸಂಘ ಸಂಸ್ಥೆಗಳು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಸಹ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಕೇಂದ್ರದ ಬಹುತೇಕ ಕಾಂಗ್ರೆಸ್ ನಾಯಕರು ಕೂಡ ಸಿಬಿಐಗೆ ಒಪ್ಪಿಸುವುದೇ ಸೂಕ್ತ ಎನ್ನುತ್ತಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ರವಿ ಸಾವಿನ ಪ್ರಕರಣದ ವಿವಾದಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.
Advertisement