![ಹೈಕೋರ್ಟ್](http://media.assettype.com/kannadaprabha%2Fimport%2F2015%2F3%2F22%2Foriginal%2Fhighcort.jpg?w=480&auto=format%2Ccompress&fit=max)
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ಸಿಐಡಿ ಮಧ್ಯಂತರ ವರದಿ ಬಹಿರಂಗಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಭಾನುವಾರ ನಿರ್ಬಂಧ ಹೇರಿದೆ.
ಇಂದು ಭಾನುವಾರವಾಗಿದ್ದರಿಂದ ತಮ್ಮ ನಿವಾಸದಲ್ಲೇ ರಿಟ್ ಅರ್ಜಿಯ ವಿಚಾರಣೆ ನಡೆಸಿದ, ನ್ಯಾಮೂರ್ತಿ ಎಸ್. ಅಬ್ದುಲ್ ನಜೀರ್ ಅವರು, ವರದಿ ಬಹಿರಂಗಕ್ಕೆ ನಿರ್ಬಂಧ ಹೇರಿದ್ದಾರೆ.
ತನಿಖೆ ಪೂರ್ಣಗೊಳಿಸದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಸಿಐಡಿ ಅಧಿಕಾರಿಗಳಿಗೆ ಸೂಚಿಸಿರುವ ಹೈಕೋರ್ಟ್, ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಹಾಗೂ ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಡಿ.ಕೆ.ರವಿ ಅವರ ಸ್ನೇಹಿತೆಯಾಗಿದ್ದ ಮಹಿಳಾ ಐಎಎಸ್ ಅಧಿಕಾರಿ ಪತಿ, ಸಿಐಡಿ ಸಿಬ್ಬಂದಿ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.
ತನಿಖೆ ಪೂರ್ಣಗೊಳ್ಳದೆ ಮಧ್ಯಂತರ ವರದಿ ಸಲ್ಲಿಸುವುದು ಸರಿಯಲ್ಲ ಎಂದು ಮಹಿಳಾ ಐಎಎಸ್ ಅಧಿಕಾರಿ ಪತಿ ಪರ ವಕೀಲರು ವಾದ ಮಂಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೀಡಿರುವ ಪ್ರಾಥಮಿಕ ತನಿಖಾ ವರದಿಯ ಸಂಪೂರ್ಣ ವಿವರನ್ನು ಸೋಮವಾರ ಸದನಕ್ಕೆ ನೀಡಲಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮಹಿಳಾ ಐಎಎಸ್ ಅಧಿಕಾರಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
Advertisement