
ನವದೆಹಲಿ: ದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯ ವಿವಾದ ಹೆಚ್ಚುತ್ತಿದೆ. ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ "ಅಸಹ್ಯ" ಎಂದು ಟ್ವೀಟ್ ಮಾಡಿರುವುದು ಹೊಸ ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ರಾಷ್ಟ್ರೀಯ ದಿನದ ಅಂಗವಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಅಭಿನಂದನೆ ಸಲ್ಲಿಸುರವ ಹಿನ್ನಲೆಯಲ್ಲೇ ವಿಕೆ ಸಿಂಗ್ ಅವರ ಈ ಟ್ವೀಟ್ ಕುತೂಹಲ ಕೆರಳಿಸಿದೆ.
ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಮಾತನಾಡಿದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ "ಕಾರಣವೇ ಇಲ್ಲದೆ ಸುಮ್ಮನೆ ವಿವಾದ ಸೃಷ್ಟಿಸಬೇಡಿ" ಎಂದು ಹುರಿಯತ್ ನಾಯಕರನ್ನು ಸಂಭ್ರಮಾಚರಣೆಗೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ "ನಾವು ಹುರಿಯತ್ ನಾಯಕರನ್ನು ಭೇಟಿ ಮಾಡುತ್ತಿರುವುದನ್ನು ಭಾರತ ಸರ್ಕಾರ ವಿರೋಧಿಸಿಲ್ಲ" ಎಂದು ನುಡಿದಿದ್ದಾರೆ.
ಇದರಿಂದ ಕುಪಿತಗೊಂಡಿರುವ ವಿದೇಶಾಂಗ ಸಚಿವಾಲಯ "ಭಾರತ ಮತ್ತು ಪಾಕಿಸ್ತಾನದ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಎರಡೇ ಪಾರ್ಟಿಗಳು ಇರುವುದು. ಮೂರನೆ ಸಂಘಟನೆಯ ಅವಶ್ಯಕತೆ ಇಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನರಲ್ ವಿಕೆ ಸಿಂಗ್ ಅಲ್ಲಿ ೧೦ ನಿಮಿಷಗಳನ್ನು ಕಳೆದು ಹೊರ ಬಂದ ನಂತರ, ಹುರಿಯತ್ ನಾಯಕರ ಬಗ್ಗೆ ಪಾಕಿಸ್ತಾನ ರಾಯಭಾರಿ ಆಡಿರುವ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ 'ಅಸಹ್ಯ' ಎಂದು ಟ್ವೀಟ್ ಮಾಡಿದ್ದಾರೆ.
Advertisement