
ನವದೆಹಲಿ: ಆಮ್ ಆದ್ಮಿ ಪಕ್ಷ ಇಂದು ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಕ್ಕೆ ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟಿಸಿದ್ದಾರೆ.
ನಾಟಕೀಯ ಬೆಳವಣಿಗೆಯಲ್ಲಿ ೩೦೦ ಜನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಲ್ಲಿ ೨೩೦ ಜನ ಯೋಗೇಂದ್ರ ಮತ್ತು ಭೂಷಣ್ ಅವರನ್ನು ಉಚ್ಛಾಟನೆ ಮಾಡುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ.
ಭಾವನಾತ್ಮಕ ಭಾಷಣ ಮಾಡಿದ ಪಕ್ಷದ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ನಿರ್ಣಯ ಕೈಗೊಳ್ಳುವ ಮುನ್ನ ಸಭೆಯಿಂದ ಹೊರನಡೆದರು ಎನ್ನಲಾಗಿದೆ. ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಉಚ್ಚಾಟನೆಯ ಪ್ರಸ್ತಾವನೆಯನ್ನು ಸಭೆಯ ಮುಂದಿಟ್ಟಾಗ ಬಹುಮತದಲ್ಲಿ ಈ ನಿರ್ಣಯ ಅಂಗೀಕಾರವಾಗಿದೆ ಎಂದು ತಿಳಿದುಬಂದಿದೆ.
ಸಭೆಯ ಹೊರಗೆ ಧರಣಿ ಕುಳಿತಿದ್ದ ಯೋಗೆಂದ್ರ ಯಾದವ್ ಈ ನಡೆಯಿಂದ ಆಘಾತ ವ್ಯಕ್ತಪಡಿಸಿ "ಇದೆಲ್ಲವೂ ಮೊದಲೇ ನಿರ್ಣಯವಾಗಿತ್ತು. ಇದು ಪ್ರಜಾಪ್ರಭುತ್ವದ ಕೊಲೆ" ಎಂದಿದ್ದಾರೆ.
ಸಭೆಯಲ್ಲಿ ಬೋಗಸ್ ಮತದಾನ ಮಾಡಲಾಗಿದೆ ಎಂದಿದ್ದಾರೆ ಯಾದವ್.
ನಮ್ಮ ಬೆಂಬಲಿಗರನ್ನು ಹೊಡೆಸಲು ಗೂಂಡಾಗಳನ್ನು ಕರೆತರಲಾಗಿತ್ತು. ನಮ್ಮ ಬಹುತೇಕ ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಪ್ರಶಾಂತ್ ಭೂಷಣ್ ದೂರಿದ್ದಾರೆ.
ಸಭೆಯಲ್ಲಿದ್ದ ಯಾದವ್ ಬೆಂಬಲಿಗರಾದ ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಕೂಡ ಪಕ್ಷ ರಾಷ್ಟೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟಿಸಲಾಗಿದೆ.
Advertisement