ಅಮರನಾಥ ಯಾತ್ರೆ ಸಮಯ ನಿರ್ಬಂಧನೆಗೆ ಗೀಲಾನಿ ಕರೆ

ಕಣಿವೆಯ ಪ್ರತ್ಯೇಕ ಪಟ್ಟಣ ಸಮುಚ್ಚಯದಲ್ಲಿ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಜಮ್ಮು ಕಾಶ್ಮೀರ ಸರ್ಕಾರದ ನಡೆಯನ್ನು ವಿರೋಧಿಸಿದ್ದ
ಅಮರನಾಥ ಯಾತ್ರೆಯ ಒಂದು ದೃಷ್ಯ
ಅಮರನಾಥ ಯಾತ್ರೆಯ ಒಂದು ದೃಷ್ಯ

ಶ್ರೀನಗರ: ಕಣಿವೆಯ ಪ್ರತ್ಯೇಕ ಪಟ್ಟಣ ಸಮುಚ್ಚಯದಲ್ಲಿ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಜಮ್ಮು ಕಾಶ್ಮೀರ ಸರ್ಕಾರದ ನಡೆಯನ್ನು ವಿರೋಧಿಸಿದ್ದ ತೀವ್ರವಾದಿ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಈಗ ವಾರ್ಷಿಕ ಅಮರನಾಥ ಯಾತ್ರೆಯ ಸಮಯವನ್ನು ೩೦ ದಿನಕ್ಕೆ ಮೊಟಕುಗೊಳಿಸಿ, ಕಣಿವೆಯಲ್ಲಿ ಮದ್ಯ ಮರಾಟವನ್ನಿ ನಿಷೇಧಿಸಲು ಆಗ್ರಹಿಸಿದ್ದಾರೆ. ಏಳು ವರ್ಷಗಳ ನಂತರ ದಕ್ಷಿಣ ಕಾಶ್ಮೀರದಲ್ಲಿ ನಡೆದ ಮೊದಲ ಸಾರ್ವಜನಿಕ ಸಭೆಯನ್ನಿದ್ದೇಶಿಸಿ ಅವರು ಮಾತನಾಡಿದರು.

"ದಕ್ಷಿಣ ಕಾಶ್ಮೀರದ ಅಮರನಾಥ ಗುಹೆ ತೀರ್ಥಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಹಿಂದು ತೀರ್ಥಯಾತ್ರೆಯನ್ನು ೩೦ ದಿನಗಳಿಗೆ ನಿರ್ಬಂಧಿಸಬೇಕು. ಹಾಗೂ ಭಕ್ತಾದಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು"ಎಂದು ಗೀಲಾನಿ ಹೇಳಿದ್ದಾರೆ.

ಈ ರ್ಯಾಲಿಯ ವೇಳೆಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಹಾರಿಸಲಾಗಿದ್ದು ಪಾಕಿಸ್ತಾನ ಪರದ ಘೋಷಣೆಗಳನ್ನು ಕೂಗಲಾಗಿದೆ. ಈ ಹಿಂದೆ ಗೀಲಾನಿ ಅವರ ಆಪ್ತ ಏಪ್ರಿಲ್ ೧೫ ರಂದು ಪಾಕಿಸ್ತಾನದ ಧ್ವಜಗಳನ್ನು ಹಾರಿಸಿ ಪಾಕಿಸ್ತಾನ ಪರದ ಘೋಷಣೆಗಳನ್ನು ಕೂಗಿದ್ದಕ್ಕೆ  ಮಾಶರಂ ಆಲಂನನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿತ್ತು.

ಗೃಹ ಬಂಧನದ ಆದೇಶವನ್ನು ಮೀರಿ ಗೀಲಾನಿ ಈ ರ್ಯಾಲಿಗೆ ಬಂದಿದ್ದಾರೆ. ಕಣಿವೆಯಲ್ಲಿ ಮದ್ಯಮಾರಟವನ್ನು ನಿಷೇಧಿಸುವಂತೆ ಕರೆ ಕೊಟ್ಟಿರುವ ಅವರು "ಕಣಿವೆಯ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಬೇಕು. ತುಂಬುಹೃದಯದಿಂದ ಕಣಿವೆಗೆ ಪ್ರವಾಸಿಗರನ್ನು ಮತ್ತು ಭಕ್ತಾದಿಗಳನ್ನು ಆಹ್ವಾನಿಸುತ್ತೇವೆ, ಆದರೆ ಶತಮಾನಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನು ಹಾಗು ಪರಿಸರವನ್ನು ಹಾಳುಗೆಡವಲು ಬಿಡುವುದಿಲ್ಲ. ಯಾವುದೇ ರೀತಿಯಲ್ಲಾದರೂ ಮೌಲ್ಯಗಳನ್ನು ಮತ್ತು ಪರಿಸರವನ್ನು ರಕ್ಷಿಸಲು ಪ್ರಯತ್ನಿಸುತೇವೆ" ಎಂದು ಗೀಲಾನಿ ಹೇಳಿದ್ದಾರೆ.

ಕಾಶ್ಮೀರಿ ಮುಸ್ಲಿಮರು, ಪಂಡಿತರು, ಸಿಕ್ಖರು ಮತ್ತು ಕ್ರಿಶ್ಚಿಯನ್ನರು ರಾಜ್ಯದ ಅವಿಭಾಜ್ಯ ಅಂಗ ಎಂದಿರುವ ಅವರು "ಮುಸ್ಲಿಮರಿಂದ ಪಂಡಿತರಿಗೆ ಯಾವುದೇ ಭಯ ಇಲ್ಲ ಮತ್ತು ಅವರ ಸುರಕ್ಷತೆಯನ್ನು ನಾವು ಕಾಯುತ್ತೇವೆ. ೧೯೯೦ ರಲ್ಲಿ ರಾಜ್ಯದಲ್ಲಿ ೨೧೫ ಪಂಡಿತರ ಹತ್ಯೆಯಾಗಿತ್ತು, ಈ ಕೊಲೆಗಳನ್ನು ನಾವು ಖಂಡಿಸುತ್ತೇವೆ ಆದರೆ ಅದು ಜನಾಂಗಹತ್ಯೆ ಅಲ್ಲ" ಎಂದಿರುವ ಗೀಲಾನಿ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ಕಟ್ಟುವುದು ಧಾರ್ಮಿಕ ಗೆರೆ ಎಳೆದು ಕಾಶ್ಮೀರವನ್ನು ಬೇರ್ಪಡಿಸಿದಂತೆ, ಆದುದರಿಂದ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com