ಮಾತೃಭಾಷೆಯಲ್ಲೇ ಕಡ್ಡಾಯ ಶಿಕ್ಷಣಕ್ಕೆ ಬದ್ಧ: ವೆಂಕಯ್ಯ ನಾಯ್ಡು
ಬೆಂಗಳೂರು: ಕನ್ನಡ ಮಾತೃ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಜಾರಿಯಾಗಲೇ ಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಹಾಗೂ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರವರೆಗಿನ ಮೆಟ್ರೋ ಮಾರ್ಗ ರೀಚ್ 3ಬಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆ ನಮ್ಮ ಸಂಸ್ಕೃತಿ, ಆಚಾರ. ಹೀಗಾಗಿ ಇದನ್ನು ಯಾರೂ ಮರೆಯಬಾರದು. ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಅವರೂ ಒಲವು ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮಾತೃಭಾಷಾ ಶಿಕ್ಷಣ ವಿಷಯಕ್ಕೆ ನನ್ನ ಬೆಂಬಲವೂ ಇದೆ. ಪಕ್ಷಾತೀತವಾಗಿ ಇದನ್ನು ನಾವು ಬೆಂಬಲಿಸಬೇಕು. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ಸ್ವತಃ ಪ್ರಧಾನಿಯವರೇ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ನಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರುವಂತೆ ಶ್ರಮಿಸಲು ಸಲಹೆ ನೀಡಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ