
ಬೆಂಗಳೂರು: ಐಎಎಸ್ ಮಾಫಿಯಾ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರನ್ನು ಹತ್ಯೆ ಮಾಡಿದೆ ಎಂದು ಇತ್ತೀಚಿಗೆ ಕಡ್ಡಾಯವಾಗಿ ನಿವೃತ್ತಗೊಂಡ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್ ಅವರು ಆರೋಪಿಸಿದ್ದಾರೆ.
ವಿಜಯಕುಮಾರ್ ಅವರು ಗುರುವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಡ್ಡಾಯ ನಿವೃತ್ತಿ ಆದೇಶ ಹಿಂಪಡೆಯುವಂತೆ ಕಳುಹಿಸಿರುವ ಮನವಿ ಪತ್ರದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಈ ವೇಳೆ ಡಿಕೆ ರವಿ ನಿಗೂಢ ಸಾವಿನ ಕುರಿತ ಪ್ರತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಡಿ.ಕೆ.ರವಿ ಸಾವು ಸಹಜ ಸಾವಲ್ಲ. ನನ್ನ ಪ್ರಕಾರ ಅದು ಕೊಲೆ ಎಂದಿದ್ದಾರೆ. ಅಲ್ಲದೆ ರಾಜ್ಯದ ಐಎಎಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಂದಿದ್ದು, ರಾಜ್ಯ ಮಟ್ಟದ ಹಾಗೂ ಕೇಂದ್ರದ ಐಎಎಸ್ ಅಧಿಕಾರಿಗಳವರೆಗೂ ನನ್ನ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.
ಸರ್ಕಾರದ ನಿವೃತ್ತ ಕಾರ್ಯದರ್ಶಿ ಪಿ.ಬಿ.ಮಹಿಷಿ, ರಂದನಾಥ್, ಚಿನ್ನಪಪ್ಪರವರಂಥವರಿಂದ ತೀವ್ರ ಜೀವ ಬೆದರಿಕೆಗೆ ಒಳಗಾಗಿದ್ದೆ. ಈ ಸಂಬಂಧ 2011ರಲ್ಲೇ ದೂರು ದಾಖಲಿಸಿದ್ದೇನೆ ಎಂದು ವಿಜಯಕುಮಾರ್ ತಿಳಿಸಿದರು.
2007ರಲ್ಲಿ ಮಹಿಷಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಆದ್ದರಿಂದ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ನನ್ನ ನಿವೃತ್ತಿ ವಿಚಾರದ ಕುರಿತು ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡದಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.
ಇನ್ನು ಮೇ 30ರೊಳಗೆ ತಮಗೆ ನೀಡಿರುವ ಕಡ್ಡಾಯ ನಿವೃತ್ತಿ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ವಿಜಯಕುಮಾರ್, ಒಂದು ಆದೇಶವನ್ನು ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Advertisement