
ಶ್ರೀನಗರ: ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗಿಲಾನಿ ಅವರಿಗೆ ಪಾಸ್ ಪೋರ್ಟ್ ನೀಡುವ ವಿಷಯದಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಮೈತ್ರಿ ಪಕ್ಷಗಳಾದ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಭಿನ್ನ ನಿಲುವು ತಳೆದಿವೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗಿಲಾನಿ ಅವರಿಗೆ ಪಾಸ್ ಪೋರ್ಟ್ ನೀಡಬೇಕು ಎಂದಿದ್ದರೆ ಬಿಜೆಪಿ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸಿದೆ.
ಸೌದಿ ಅರೇಬಿಯಾದಲ್ಲಿ ಅನಾರೋಗ್ಯದಿಂದಿರುವ ತಮ್ಮ ಮಗಳನ್ನು ಭೇಟಿ ಮಾಡಲು ಗಿಲಾನಿ ತಮ್ಮ ಪತ್ನಿ ಮತ್ತು ಮಗ ಮೂವರಿಗೂ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದು ಮಾನವೀಯತೆಯ ವಿಷಯವಾಗಿದ್ದು ಗಿಲಾನಿ ಅವರಿಗೆ ಪಾಸ್ ಪೋರ್ಟ್ ಸಿಗುವಂತೆ ತಾವು ಸಹಕರಿಸುತ್ತೇವೆ ಎಂದು ಬುಧವಾರ ವರದಿಗಾರರಿಗೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
ಆದರೆ ಅಂತಿಮ ನಿರ್ಧಾರ ಗೃಹ ಸಚಿವಾಲಯದಾಗಿರುತ್ತದೆ ಎಂದು ಅವರು ಸೇರಿಸಿದ್ದಾರೆ.
ಗಿಲಾನಿ ಅವರಿಗೆ ಪಾಸ್ ಪೋರ್ಟ್ ನೀಡಬೇಕು ಎಂದು ಹಿರಿಯ ಪಿಡಿಪಿ ನಾಯಕ ತಾರಿಕ್ ಹಮೀದ್ ಕರ್ರ ಕೂಡ ಹೇಳಿದ್ದಾರೆ.
ಗಿಲಾನಿ, ದೇಶದ ಒಕ್ಕೂಟಕ್ಕೆ ರಾಜ್ಯದ ಸೇರ್ಪಡೆಯನ್ನು ಒಪ್ಪಿ, ದೇಶದ ಸಂವಿಧಾನವನ್ನು ಮಾನ್ಯ ಮಾಡಿದರೆ ಮಾತ್ರ ಗಿಲಾನಿ ಅವರಿಗೆ ಪಾಸ್ ಪೋರ್ಟ್ ನೀಡಬಹುದು ಎಂದು ಬಿಜೆಪಿ ಪಕ್ಷ ತಿಳಿಸಿದೆ.
"ನೀವು ಭಾರತೀಯ ನಾಗರಿಕ ಎಂದು ಹಾಗು ಭಾರತಿಯ ಸಂವಿಧಾನವನ್ನು ಒಪ್ಪಿಕೊಳ್ಳದ ಹೊರತು ಪಾಸ್ ಪೋರ್ಟ್ ಗೆ ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ?" ಬಿಜೆಪಿ ವಕ್ತಾರ ಖಾಲಿದ್ ಜೆಹಂಗೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹಿಂದೆ ೨೦೦೭, ೨೦೦೮ ಮತ್ತು ೨೦೧೧ ರಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲು ಕೇಂದ್ರ ಸರ್ಕಾರ ಗಿಲಾನಿಗೆ ಸೀಮಿತ ಪಾಸ್ ಪೋರ್ಟ್ ನೀಡಿತ್ತು ಆದರೆ ಆ ಸಮಯದಲ್ಲಿ ಗಿಲಾನಿ ಯಾವುದೇ ಪ್ರವಾಸ ಕೈಗೊಂಡಿರಲಿಲ್ಲ.
ಮಂಗಳವಾರ ಗಿಲಾನಿ ಅವರ ಪತ್ನಿ ಮತ್ತು ಮಗ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತ್ಯೇಕವಾದಿ ಸಂಘಟನೆಯ ಮೂಲಗಳ ಪ್ರಕಾರ ಗಿಲಾನಿ ಗೃಹಬಂಧನದಲ್ಲಿ ಇರುವುದರಿಂದ ಶಿಷ್ಟಾಚಾರಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಆದರೆ ಗಿಲಾನಿ ಗೃಹ ಬಂಧನದಲ್ಲಿರುವುದನ್ನು ಪೊಲೀಸ್ ಮಹಾನಿರ್ದೇಶಕ ರಾಜೆಂದ್ರ ಕುಮಾರ್ ನಿರಾಕರಿಸಿದ್ದಾರೆ.
Advertisement