
ಬೆಂಗಳೂರು: ರಾಜ್ಯದಲ್ಲಿ ಮೇ 29ರಂದು ಮತ್ತು ಜೂನ್ 2ರಂದು ಎರಡು ಹಂತಗಳಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, 8687 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿಂದು ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ 5835 ಗ್ರಾಮ ಪಂಚಾಯತ್ ಗಳಿದ್ದು, 94,348 ಸ್ಥಾನಗಳಿವೆ. 901 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. 84,760 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 2,33493 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು 37754 ಮತಗಟ್ಟೆಗಳಿದ್ದು, ಅದರಲ್ಲಿ 8515 ಸೂಕ್ಷ್ಮ, 6167 ಅತಿಸೂಕ್ಷ್ಮ ಮತಗಟ್ಟೆಗಳಿವೆ. 27850874 ಮತದಾರರಿದ್ದು, ಅದರಲ್ಲಿ 14180139 ಪುರುಷರು ಮತ್ತು 13670735 ಮಹಿಳಾ ಮತದಾರಿದ್ದಾರೆ. ಒಟ್ಟು 188770 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 39891 ಪೊಲೀಸ್ ಸಿಬ್ಬಂದಿ, 582 ಮೀಸಲು ಪಡೆಯ ಸಿಬ್ಬಂದಿ ಹಾಗೂ 18879 ಹೋಮ್ ಗಾರ್ಡ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಉಪವಿಭಾಗಕ್ಕೆ ಒಬ್ಬರಂತೆ 52 ಚುನಾವಣಾ ವೀಕ್ಷಕರನ್ನು ಹಾಗೂ ಪ್ರತಿ 15 ಗ್ರಾಮ ಪಂಚಾಯತ್ ಗೆ ಒಬ್ಬರಂತೆ 352 ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದ ಅವರು, ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಮೊದಲ ಹಂತಕ್ಕೆ 31ರಂದು ಎರಡನೇ ಹಂತಕ್ಕೆ ಜೂನ್ 4 ರಂದು ಮರು ಮತದಾನ ನಡೆಯಲಿದೆ. ಜೂನ್ 5ರಂದು ಎರಡೂ ಹಂತದ ಮತ ಎಣಿಕೆ ನಡೆಯಲಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು.
Advertisement