ಯದುಕುಲಕ್ಕೆ ಹೊಸ ದೊರೆ

ಸ್ವಾತಂತ್ರಪೂರ್ವದಲ್ಲಿ ದೇಶದ ವಿವಿಧ ಭಾಗಗಳನ್ನು ಹಲವು ರಾಜರು, ಸಾಮಂತರು, ಪಾಳೇಗಾರರು ಆಳಿದ್ದಾರೆ. ಈಗಲೂ ದೇಶದಲ್ಲಿ ಹಲವಾರು ರಾಜವಂಶಸ್ಥರು...
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Updated on

ಮೈಸೂರು: ಸ್ವಾತಂತ್ರಪೂರ್ವದಲ್ಲಿ ದೇಶದ ವಿವಿಧ ಭಾಗಗಳನ್ನು ಹಲವು ರಾಜರು, ಸಾಮಂತರು, ಪಾಳೇಗಾರರು ಆಳಿದ್ದಾರೆ. ಈಗಲೂ ದೇಶದಲ್ಲಿ ಹಲವಾರು ರಾಜವಂಶಸ್ಥರು ಬಾಳಿ ಬದುಕುತ್ತಿದ್ದಾರೆ. ಆದರೆ ಮೈಸೂರು ಯದುವಂಶದ ರಾಜಮನೆತನದ ಬಗ್ಗೆ ವಿಶೇಷ ಗೌರವ. ಈ ಗೌರವ ಇತರ ರಾಜಮನೆತನಗಳಿಗಿಲ್ಲ ಎಂದೇ ಹೇಳಬಹುದು.
ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಅರಸರಿಗೆ ಬಳವಳಿಯಾಗಿ ಬಂದ ದಸರಾ ಮಹೋತ್ಸವವನ್ನು ಕಳೆದ ನಾಲ್ಕು ಶತಮಾನಗಳಿಗಿಂತಲೂ ಮಿಗಿಲಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವುದು, ದಸರಾ ಪ್ರಸಿದ್ದವಾಗಿರುವುದೂ ಇದಕ್ಕೆ ಕಾರಣವಾಗಿರಬಹುದು. ಶತಮಾನಗಳಿಂದಲೂ ದಸರೆಯ ಸಂದರ್ಭದಲ್ಲಿ ರಾಜಪೋಷಾಕು ಧರಿಸಿ, ಖಾಸಗಿ ದರ್ಬಾರ್ ನಡೆಸುತ್ತಾ ಬಂದಿರುವುದು, ಮಹಾತ್ಮ ಗಾಂಧಿ ಅವರಿಂದಲೇ ರಾಜರ್ಷಿ ಎಂದು ಕರೆಸಿಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿಯ ಕಾರ್ಯಗಳು ಕೂಡ ಮೈಸೂರು ರಾಜಮನೆತನದ ಮೇಲಿನ ಅಭಿಮಾನ, ಗೌರವ ಹೆಚ್ಚಿಸಿವೆ. ಸ್ವಾತಂತ್ರ್ಯ ನಂತರ 1969ರಲ್ಲಿ ದೇಶಾದ್ಯಂತ ರಾಜಾಡಳಿತ ಅಂತ್ಯಗೊಂಡು ಪ್ರಜಾತಂತ್ರ ಮೆರೆಯಿತು. ಆದರೂ ಕೆಲ ಪ್ರದೇಶಗಳಲ್ಲಿ ರಾಜಪ್ರಭುತ್ವದ ಸಂಪ್ರದಾಯ ಸಾಂಕೇತಿಕವಾಗಿ ನಡೆದುಕೊಂಡು ಬಂತು. ಮೈಸೂರು ರಾಜ್ಯ ದಲ್ಲಿಯೂ ಇಂಥದ್ದೇ ವಿದ್ಯಮಾನ ನಡೆಯುತ್ತಾ ಬಂದಿದೆ.

ರಾಜಮನೆತನದೊಂದಿಗೆ ಮೈಸೂರು ಪ್ರದೇಶದ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರಿಂದ ಆ ವೈಭವ ಇಂದಿಗೂ ಮುಂದುವರಿದಿದೆ. ವೈಭವಕ್ಕೆ ಇಂಬು ಕೊಟ್ಟಂತೆ ಈಗ ಮೈಸೂರು ರಾಜಮನೆತನಕ್ಕೆ ಪಟ್ಟಾಭಿಷೇಕದ ಸಂಭ್ರಮ. ಸುಮಾರು ನೂರೈವತ್ತು ವರ್ಷಗಳ ಬಳಿಕ ಅರಮನೆಯಲ್ಲಿ ದತ್ತು ಸ್ವೀಕಾರ
ಸಮಾರಂಭ ನಡೆಯಿತು ಮತ್ತು ಈಗ, 41 ವರ್ಷಗಳ ಬಳಿಕಉತ್ತರಾಧಿಕಾರಿಗೆ ಪಟ್ಟಾಭಿಷೇಕ ನಡೆಯಲಿದೆ. ಉತ್ತರಾಧಿಕಾರಿಯಾಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಕೂಡ ಇದೇ ವರ್ಷಾಂತ್ಯದಲ್ಲಿ ನಡೆಯುವ ಸಂಭವವಿದೆ. ಅಲ್ಲಿಗೆ ವರ್ಷವಿಡೀ ರಾಜಕುಟುಂಬಕ್ಕೆ ಶುಭ ಸಮಾಚಾರಗಳೇ.
2013ರ ಡಿ.10ರಂದು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿಧನರಾದಾಗ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕಾಡಿತ್ತು. ಏಕೆಂದರೆ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್- ಪ್ರಮೋದಾದೇವಿ ಅವರಿಗೆ ಮಕ್ಕಳಿರಲಿಲ್ಲ. ಅವರು ಯಾರನ್ನೂ ಕೂಡ ದತ್ತು ಸ್ವೀಕರಿಸಿರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಡೆಯರ್ ಅವರ ಸಹೋದರಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜ ಅರಸ್ ಅವರು ಅಂತ್ಯಕ್ರಿಯೆ ಸಂದರ್ಭದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಹೀಗಾಗಿ ಸಹಜವಾಗಿ ಅವರೇ ಉತ್ತರಾಧಿಕಾರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಈ ನಡುವೆ ಕಳೆದ ವರ್ಷದ ದಸರೆ ವೇಳೆಗೂ ಉತ್ತರಾಧಿಕಾರಿ ಆಯ್ಕೆಯಾಗಲಿಲ್ಲ. ಆಗ ವಜ್ರಖಚಿತ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನಿಟ್ಟು ಖಾಸಗಿ ದರ್ಬಾರ್ ನಡೆಸಲಾಗಿತ್ತು. ಪಟ್ಟದ ಕತ್ತಿಯನ್ನು ಚದುರಂಗ
ಕಾಂತರಾಜ ಅರಸ್ ಅವರೇ ಸಿಂಹಾಸನದ ಮೇಲೆ ಇರಿಸಿದ್ದರು. ರಾಜರಿಲ್ಲದಾಗ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನಿಟ್ಟು ಖಾಸಗಿ ದರ್ಬಾರ್ ನಡೆಸುವ ಸಂಪ್ರದಾಯ ಮೈಸೂರು ರಾಜಮನೆತನ ದಲ್ಲಿದೆ. ಹಿಂದೆಯೂ ಮೂರು ಬಾರಿ ಈ ರೀತಿಯಾಗಿತ್ತು.
ದಸರೆ ಮುಗಿದ ನಂತರ ಪ್ರಮೋದಾದೇವಿ ಒಡೆಯರ್ ಸ್ವರೂಪ್ ಗೋಪಾಲರಾಜ ಅರಸು-ಲೀಲಾ ತ್ರಿಪುರ ಸುಂದರಿದೇವಿ ಅವರ ಪುತ್ರ ಯದುವೀರ ಅವರನ್ನು
ದತ್ತುಪುತ್ರನನ್ನಾಗಿ ಆಯ್ಕೆ ಮಾಡಿಕೊಂಡರು. ಕಳೆದ -ಫೆ.23 ರಂದು ಯದುವೀರರನ್ನು ಪ್ರಮೋದಾ ದೇವಿ ಒಡೆಯರ್ ದತ್ತು ಸ್ವೀಕರಿಸಿದರು. ನಂತರ ಅವರ ಹೆಸರನ್ನು
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಬದಲಿಸಲಾಯಿತು. ಇದೀಗ ಉತ್ತರಾ„ಕಾರಿ ಪಟ್ಟಾಭಿಷೇಕ ಮಹೋತ್ಸವ ಕೂಡ ಜರುಗುತ್ತಿದೆ. ಮುಂಬರುವ
ದಸರಾ ಮಹೋತ್ಸವದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಜ್ರಖಚಿತ ಸಿಂಹಾಸನವೇರಿ, ಖಾಸಗಿ ದರ್ಬಾರ್ ನಡೆಸುವ ಮೂಲಕ
ಶತಶತಮಾಗಳಿಂದ ನಡೆದುಕೊಂಡು ಬಂದಿರುವ ಮೈಸೂರು ರಾಜಮನೆತನದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com