ಚೆನ್ನೈ: ಅಂಬೇಡ್ಕರ್-ಪೆರಿಯರ್ ಅಧ್ಯಯನ ಬಳಗದ(ಎ ಪಿ ಎಸ್ ಸಿ) ಮಾನ್ಯತೆಯನ್ನು ಐಐಟಿ ಮದ್ರಾಸ್ ರದ್ದುಪಡಿಸಿರುವುದನ್ನು ವಿರೋಧಿಸಿ ಡಿಎಂಕೆ ಪಕ್ಷದ ವಿದ್ಯಾರ್ಥಿ ಘಟಕ ಹಾಗು ಇತರ ರಾಜಕೀಯ ಸಂಘಟನೆಗಳು ಐಐಟಿ ಆವರಣದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಎ ಪಿ ಎಸ್ ಸಿ ಬಳಗ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ್ದರು ಎಂಬ ಆರೋಪದ ಮೇಲೆ ಐಐಟಿ ಮದ್ರಾಸ್ ಕಳೆದ ಶುಕ್ರವಾರ ಈ ವಿದ್ಯಾರ್ಥಿ ಅಧ್ಯಯನ ಬಳಗದ ಮಾನ್ಯತೆಯನ್ನು ರದ್ದು ಮಾಡಿತ್ತು. ಈ ನಡೆಯನ್ನು ವಿರೋಧಿಸಿ ಎಎಪಿ ಪಕ್ಷವೂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ದೆಹಲಿಯಲ್ಲೂ ಪ್ರತಿಭಟನೆ ನಡೆಸಿದ್ದವು.
ಈ ಆದೇಶವನ್ನು ಹಿತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಆಗ್ರಹಿಸಿದ್ದಾರೆ.
ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಹಸ್ತಕ್ಷೇಪವನ್ನು ಕೂಡ ಕರುಣಾನಿಧಿ ತೀವ್ರವಾಗಿ ವಿರೋಧಿಸಿದ್ದಾರೆ.
"ಈ ಘಟನೆಯಿಂದಾಗಿ ಸಾಮಾನ್ಯವಾಗಿ ಶಾಂತಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆ ಇಂದು ಕಾಳಗದ ಪ್ರದೇಶವಾಗಿದೆ" ಎಂದು ಅವರು ಹೇಳಿದ್ದಾರೆ.
ಇರಾನಿ ಅವರ ಹೆಸರನ್ನು ಹೇಳದೆ ಮೋದಿ ಅವರ ಕೆಲವು ಸಚಿವರ 'ಏಕಪಕ್ಷೀಯ' ಹಾಗೂ 'ಸರ್ವಾಧಿಕಾರ' ಧೋರಣೆಯಿಂದಾಗಿ ದೇಶದ ಶಾಂತಿ ಮತ್ತು ಯುವ ಜನರಿಗೆ ಧಕ್ಕೆಯುಂಟಾಗುತ್ತಿದೆ ಎಂದು ಕರುಣಾನಿಧಿ ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮೇಲಿನ ಕ್ರಮದ ಮೇಲೆ ಐಐಟಿ ಮದ್ರಾಸ್ ಸಂಸ್ಥೆಗೆ ಭಾನುವಾರ ನೋಟಿಸ್ ಜಾರಿ ಮಾಡಿದೆ.
Advertisement