
ನವದೆಹಲಿ: ಭಾರತ 'ಸಹನೆಯ ಸಮಾಜ' ಎಂದು ಕೇಂದ್ರ ಸರ್ಕಾರ ಹೇಳಿದ ದಿನದ ನಂತರ ಎನ್ ಡಿ ಎ ಆಡಳಿತದ ಸರ್ಕಾರದ ಮೇಲೆ ಸೋಮವಾರ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ ಇಂದಿನ ಘಟನೆಗಳನ್ನು ನೋಡಿದರೆ ದೇಶ ವಿನಾಶದತ್ತ ಮುನ್ನುಗ್ಗುತ್ತಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಕಳಕಳಿಗೆ ಕಿವುಡಾಗಿದ್ದಾರೆ ಎಂದು ಆರೋಪಿಸಿದೆ.
"ದೇಶದಲ್ಲಿ ಭಯದ ಕಿಚ್ಚು ಹಚ್ಚಲಾಗಿದೆ ಆದರೆ ಸರ್ಕಾರಕ್ಕೆ ಅದು ಅರ್ಥವಾಗುತ್ತಿಲ್ಲ. ಅವರ ವಿರುದ್ಧ ಮಾತನಾಡುವವರನ್ನೆಲ್ಲಾ ಶತ್ರುಗಳು ಅಥವಾ ಕಾಂಗ್ರೆಸ್ ಮಿತ್ರ ಎಂದು ಅವರು ಕರೆಯುತ್ತಿದ್ದಾರೆ. ಆರ್ ಎಸ್ ಎಸ್ ಹಿಡಿತದಲ್ಲಿರುವ ಸರ್ಕಾರಕ್ಕೆ ಅಸಹನೆ ಹೆಚ್ಚುತ್ತಿರುವುದೇ ಬೇಕಾಗಿದೆ. ಆದುದರಿಂದ ಅವರು ಚುನಾವಣೆಗಳನ್ನು ಗೆಲ್ಲಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ಮುಖಂಡ ರಶೀದ್ ಆಳವಿ ಹೇಳಿದ್ದಾರೆ.
"ಪ್ರಧಾನಿ ಮೋದಿ ಪ್ರತಿ ತಿಂಗಳು ರೇಡಿಯೋದಲ್ಲಿ ಆರ್ ಎಸ್ ಎಸ್ 'ಮನ್ ಕಿ ಬಾತ್' (ಮನದ ಮಾತು) ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಇದೆ ಹಾದಿಯಲ್ಲಿ ಸರ್ಕಾರ ಮುಂದುವರೆದರೆ ದೇಶ ವಿನಾಶದತ್ತ ಮುನ್ನಡೆಯಲಿದೆ. ಇದು ಕಳವಳದ ಸಂಗತಿ" ಎಂದು ಅವರು ಹೇಳಿದ್ದಾರೆ.
"ದೇಶದ ಚಿಂತಕರು ಪ್ರತಿಭಟಿಸುತ್ತಿರುವುದರಲ್ಲಿ ಅರ್ಥವಿದೆ. ಆರ್ ಎಸ್ ಎಸ್ ನಿಂದ ದೂರವುಳಿಯಲು ಸರ್ಕಾರಕ್ಕೆ ಇದು ಸಕಾಲ" ಎಂದು ಅವರು ಹೇಳಿದ್ದಾರೆ.
Advertisement