ಉಪ ಲೋಕಾಯುಕ್ತರ ನೇಮಕ: 3ನೇ ಬಾರಿಯೂ ನ್ಯಾ.ಮಂಜುನಾಥ್ ಹೆಸರು ತಿರಸ್ಕಾರ
ಬೆಂಗಳೂರು: ಉಪ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾ.ಕೆ. ಎಲ್.ಮಂಜುನಾಥ್‍ರನ್ನೇ ನೇಮಿಸಬೇಕೆಂದು ಹಠಕ್ಕೆ ಬಿದ್ದಿದ್ದ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ.
ಹಲವು ತಿಂಗಳಿಂದ ಖಾಲಿ ಇರುವ ಉಪ ಲೋಕಾಯುಕ್ತರ ಹುದೆಗ್ದೆ ನ್ಯಾ.ಕೆ. ಎಲ್.ಮಂಜುನಾಥ್ ಅವರನ್ನು ನೇಮಿಸುವಂತೆ ಕೋರಿ ಮೂರನೇ ಬಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸರ್ಕಾರ ಪ್ರಸ್ತಾಪನೆ ಸಲ್ಲಿಸಿತ್ತು. ಆದರೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್. ಕೆ. ಮುಖರ್ಜಿ ಅವರು ಉಪ ಲೋಕಾಯುಕ್ತ ಹುದ್ದೆಗೆ ಮಂಜುನಾಥ್ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಯಲ್ಲಿ ರಾಜ್ಯಪಾಲರು ಮತ್ತೆ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾ.ಕೆ.ಎಲ್.ಮಂಜುನಾಥ್ ವಿವಾದಿತ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಉಪಲೋಕಾಯುಕ್ತರನ್ನಾಗಿ ನ್ಯಾ.ಮಂಜುನಾಥ್ ನೇಮಕ ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನ್ಯಾ.ಅಜಿತ್ ಗುಂಜಾಳ್ ಅವರನ್ನು ನೇಮಿಸಲು ಶಿಫಾರಸು ಮಾಡಿದ್ದರು.
ನ್ಯಾ.ಮಂಜುನಾಥ್ ಅವರನ್ನು ನೇಮಿಸುವಂತೆ ಸರ್ಕಾರ ಈ ಹಿಂದೆಯೂ 2 ಬಾರಿ ಶಿಫಾರಸು ಮಾಡಿತ್ತು. ಆಗ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು. ಆದರೆ ಪಟ್ಟು ಬಿಡದ ರಾಜ್ಯ ಸರ್ಕಾರ 3ನೇ ಬಾರಿಯೂ ಕೆ.ಎಲ್.ಮಂಜುನಾಥ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಉಪ ಲೋಕಾಯುಕ್ತರಾಗಿದ್ದ ಎಸ್.ಬಿ. ಮಜಗೆ ನಿವೃತ್ತಿ ನಂತರ ಆ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಲು ಸರ್ಕಾರ ಪ್ರಕ್ರಿಯೆ ಆರಂಭಿಸಿತ್ತು. ನಿರೀಕ್ಷೆಯಂತೆ ನ್ಯಾ. ಕೆ.ಎಲ್.ಮಂಜುನಾಥ್ ಅವರನ್ನು ನೇಮಕ ಮಾಡುವಂತೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜ್ಯಪಾಲರು ನಿರ್ದಿಷ್ಟ ಆಕ್ಷೇಪ ಎತ್ತುವ ಮೂಲಕ ಸರ್ಕಾರದ ಪ್ರಸ್ತಾಪವನ್ನು ವಾಪಸ್ ಕಳುಹಿಸಿದ್ದರು. ಇದರಿಂದ ಹಠಕ್ಕೆ ಬಿದ್ದ ಸರ್ಕಾರ ಮೂರನೇ ಬಾರಿ ರಾಜ್ಯಪಾಲರು ಒಪ್ಪಿಗೆ ಸೂಚಿಸುತ್ತಾರೆಂದು ನಿರೀಕ್ಷಿಸಿ ಮತ್ತೆ ಪ್ರಸ್ತಾವನೆ ಸಲ್ಲಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ