ಕಮೀಷನ್ ಪಡೆಯುವಾಗ ಕ್ಯಾಮರಾಗೆ ಸಿಕ್ಕಿಬಿದ್ದ ಸಚಿವ ಆಂಜನೇಯ ಪತ್ನಿ
ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಇಲಾಖೆಯಲ್ಲಿನ ಭಷ್ಟಾಚಾರ ಬಟ ಬಯಲಾಗಿದೆ.
ಸಚಿವರ ಅಧಿಕೃತ ನಿವಾಸದಲ್ಲೇ ಅವರ ಪತ್ನಿ ವಿಜಯ ಅವರು ಕಮೀಷನ್ ಪಡೆಯುತ್ತಿರುವ ದೃಶ್ಯ ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದ್ದು, ಆಂಜನೇಯ ಪೇಚಿಗೆ ಸಿಲುಕಿದ್ದಾರೆ.
ಎಸ್ಸಿ ಎಸ್ಟಿ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ ಗೆ ಸಂಬಂಧಿಸಿದಂತೆ ಸಚಿವ ಪತ್ನಿ ವಿಜಯ ಅವರು 7 ಲಕ್ಷ ರುಪಾಯಿ ಕಮೀಷನ್ ಪಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೇರೆಯಾಗಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಜೊತೆ ಮೊದಲು ಮಾತುಕತೆ ನಡೆಸಿದ ಖಾಸಗಿ ವಾಹಿನಿ ತಂಡ, ಬಳಿಕ ಅಧಿಕಾರಿಯ ಮೂಲಕವೇ ಸಚಿವರ ಅಧಿಕೃತ ನಿವಾಸಕ್ಕೆ ತೆರಳಿ, ಸಚಿವರ ಪತ್ನಿಗೆ 7 ಲಕ್ಷ ರುಪಾಯಿ ಲಂಚದ ಹಣವನ್ನು ಟೇಬಲ್ ಮೇಲಿಟ್ಟು ಭ್ರಷ್ಟಾಚಾರದ ಮತ್ತೊಂದು ಮುಖವನ್ನು ಬಯಲು ಮಾಡಿದ್ದಾರೆ.
ಸಚಿವರ ರಾಜಿನಾಮೆ ಆಗ್ರಹ
ಸಚಿವ ಆಂಜನೇಯ ಪತ್ನಿ ಲಂಚ ಪಡೆಯುತ್ತಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಸಮಾಜ ಕಲ್ಯಾಣ ಸಚಿವರು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಈ ಪ್ರಕರಣದಿಂದ ಸಾಬೀತಾಗಿದ್ದು, ಆಂಜನೇಯ ಅವರು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ