ದೃಷ್ಟಿಚೇತನ ವಿದ್ಯಾರ್ಥಿನಿಯ ನೆರವಿಗೆ ಬಂದ ರಾಹುಲ್

ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಿದ್ದ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಬೆಂಗಳೂರು: ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಿದ್ದ ಸಂವಾದದ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನೇ ಸಾಮಾಜಿಕ ತಾಣಗಳು ಸುರಿಮಳೆಗೈದಿದ್ದವು. ಆದರೆ, ಇದೇ ಕಾಲೇಜಿನ ದೃಷ್ಟಿಚೇತನ ವಿದ್ಯಾರ್ಥಿನಿಯೊಬ್ಬಳಿಗೆ ರಾಹುಲ್ ಗಾಂಧಿ ಸಹಾಯ ಹಸ್ತ ಚಾಚಿದ್ದಾರೆ. 
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯ ನೆರವಿಗೆ ರಾಹುಲ್ ಗಾಂಧಿ ಬರೆದಿರುವ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿ ಚಂದನಾ ಚಂದ್ರಶೇಖರ್ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ದೃಷ್ಟಿಚೇತನಳಾದ ಈಕೆ ತನ್ನ ಕಲಿಕೆಗೆ ಅವಶ್ಯಕವಾದ ಬ್ರೈಲ್ ಟೇಪ್ ರೈಟರ್, ಬ್ರೈಲ್ ಕಾಗದಗಳನ್ನು ಖರೀದಿಸಲು ಕಷ್ಟು ಪಡುತ್ತಿದ್ದಾಳೆ.
ಕಾರಣ, ಇವೆಲ್ಲವನ್ನೂ ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕು. ಈಗ ಸರ್ಕಾರ ವಿದೇಶದಿಂದ ಈ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಭಾರಿ ತೆರಿಗೆ ವಿಧಿಸಿದೆ. ಇದು ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗಿಬಿಟ್ಟಿದೆ. 
ಮೌಂಟ್ ಕಾರ್ಮೆಲ್ ಸಂವಾದ ಕಾರ್ಯಕ್ರಮದ ನಂತರ ರಾಹುಲ್ ಗಾಂಧಿ ಹೊರಟರು. ಆಗ ರಾಹುಲ್ ಭೇಟಿ ಮಾಡಬೇಕೆಂದು ಅವರನ್ನು ಕೂಗಿ ಕರೆದ ಚಂದನಾಳನ್ನು ಬೆಂಗಾವಲು ಪಡೆ ಅಧಿಕಾರಿಗಳು ತಡೆದರು. ಆದರೂ, ಚಂದನಾ ಲೆಕ್ಕಿಸದೇ ಮತ್ತೆ ಕೂಗಿ ಕರೆದಾಗ ರಾಹುಲ್ ಗಾಂಧಿ ಚಂದನಾಳತ್ತ ಖುದ್ದು ಧಾವಿಸಿ ಬಂದರು. ಆಗ ರಾಹುಲ್‍ಗೆ ಚಂದನಾ ತನ್ನ ಸಂಕಷ್ಟವನ್ನು ವಿವರಿಸಿದ್ದರು. 
ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಿಸಿರುವುದರಿಂದ ಲಕ್ಷಾಂತರ ಅಂಧ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ವಿವರಿಸಿದರು. ಚಂದನಾಳ ಸಮಸ್ಯೆಯನ್ನು ಆಲಿಸಿದ ರಾಹುಲ್ ಗಾಂಧಿ ಈ ಬಗ್ಗೆ ತಮ್ಮ ಕಚೇರಿಗೆ ಪತ್ರ ಬರೆಯುವಂತೆ ಇಮೇಲ್ ವಿಳಾಸ ನೀಡಿ, ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದರು.
ಚಂದನಾ ರಾಹುಲ್ ಗಾಂಧಿ ಕಚೇರಿಗೆ ಪತ್ರ ಬರೆದಿದ್ದರು. ರಾಹುಲ್ ಸಹ ಕೊಟ್ಟ ಮಾತಿನಂತೆ ದೆಹಲಿಗೆ ಹಿಂದಿರುಗಿದ ನಂತರ ಸೋಮವಾರ ರಾಹುಲ್ ಗಾಂಧಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಪತ್ರ ಬರೆದಿದ್ದಾರೆ. 
ದೃಷ್ಟಿಚೇತನ ವಿದ್ಯಾರ್ಥಿಗಳ ಸಮಸ್ಯೆಯನ್ನು ವಿವರಿಸಿರುವ ರಾಹುಲ್, ಈ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳ ಸಬಲಿಕರಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ದೃಷ್ಟಿಚೇತನ ವಿದ್ಯಾರ್ಥಿನಿಯ ನೆರವಿಗೆ ಧಾವಿಸಿರುವ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಮೋದಿ ಸರ್ಕಾರದ ಕೇಂದ್ರ ಸಚಿವರಿಗೆ ಪತ್ರ ಬರೆದು ಸಹಾಯ ಕೋರಿದ್ದಾರೆ. ಆ ಮೂಲಕ ತಮ್ಮ ಮಾತಿಗೂ ಕೃತಿಗೂ ಸಾಮ್ಯತೆ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com