

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 'ಶೂ ಭಾಗ್ಯ' ಯೋಜನೆ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಉಚಿತ ಶೂ ವಿತರಿಸಲಾಗುವುದು ಎಂದರು. ಅಲ್ಲದೆ ಶಾಲೆಗಳಲ್ಲಿ ಶೂ ವಿತರಿಸಲು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಅನ್ನ ಭಾಗ್ಯ ಹಾಗೂ ಕ್ಷೀರ ಭಾಗ್ಯದ ನಂತರ ಇದೀಗ ಮಕ್ಕಳಿಗೆ ಶೂ ಭಾಗ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ವಿತರಿಸಲು ಹಣ ಬಿಡುಗಡೆ ಮಾಡುವಂತೆ ಕೋರಲಾಗಿದ್ದು, ಇದಕ್ಕಾಗಿ ಹಣಕಾಸು ಇಲಾಖೆಯು 122 ಕೋಟಿ ರುಪಾಯಿ ವೆಚ್ಚದಲ್ಲಿ ಶೂ ಹಾಗೂ ಸಾಕ್ಸ್ ವಿತರಿಸಲು ಒಪ್ಪಿಗೆ ನೀಡಿದೆ.
Advertisement