
ವಾಶಿಂಗ್ಟನ್: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಕೋಮು ದ್ವೇಷವನ್ನು ವಿರೋಧಿಸಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಭಾರತೀಯ ಲೇಖಕರ ಬೆಂಬಲಕ್ಕೆ ನಿಂತ ಅಂತರಾಷ್ಟ್ರೀಯ ಬರಹಗಾರರ ವೇದಿಕೆ 'ಪೆನ್ ಇಂಟರ್ನ್ಯಾಷನಲ್', ಬರಹಗಾರಾರಿಗೆ ಸೂಕ್ತ ಭದ್ರತೆ ನೀಡಿ, ಸಂವಿಧಾನದ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದೆ.
ಕೆನಡಾದ ಕ್ಯುಬೆಕ್ ನಗರದಲ್ಲಿ ಆಯೋಜಿಸಲಾಗಿದ್ದ ೮೧ನೆ ಪೆನ್ ಇಂಟರ್ನ್ಯಾಷನಲ್ ಸಮಾವೇಶದಲ್ಲಿ ಭಾಗವಹಿಸಿದ್ದ ೭೩ ರಾಷ್ಟ್ರಗಳ ಪ್ರತಿನಿಧಿಗಳು, ಭಾರತದಲ್ಲಿ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿಗಳ ಬೆಂಬಲಕ್ಕೆ ನಿಂತು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
"ಅಕಾಡೆಮಿಗೆ ಪ್ರಶಸ್ತಿ ಹಿಂದಿರುಗಿಸಿರುವ ೫೦ ಕ್ಕೂ ಹೆಚ್ಚು ಕಾದಂಬರಿಕಾರರು, ವಿದ್ವಾಂಸರು, ಕವಿಗಳು ಮತ್ತು ಸಾರ್ವಜನಿಕ ಬುದ್ಧಿಜೀವಿಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಸರ್ಕಾರ ದೇಶದ ಬಹುತ್ವವನ್ನು ಕಾಪಾಡಬೇಕು ಹಾಗು ಎಂ ಎಂ ಕಲ್ಬುರ್ಗಿ, ನರೇಂದ್ರ ದಭೋಲ್ಕರ್ ಮತ್ತು ಗೋವಿಂದ್ ಪಂಸಾರೆ ಅವರ ಕೊಲೆಯ ಶೀಘ್ರ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು" ಎಂದು ಪೆನ್ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಸೌಲ್ ಹೇಳಿದ್ದಾರೆ.
ಎಂ ಎಂ ಕಲ್ಬುರ್ಗಿ, ನರೇಂದ್ರ ದಭೋಲ್ಕರ್ ಮತ್ತು ಗೋವಿಂದ್ ಪಂಸಾರೆ ಅವರಿಗೆ ಸಂತಾಪ ಸೂಚಿಸುವ ಮೂಲಕ ಸಮಾವೇಶ ಉದ್ಘಾಟನೆಯಾಗಿದೆ. ಸಾಹಿತ್ಯದ ಪ್ರಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಲು ಇರುವ ವಿಶ್ವದ ಬರಹಗಾರರ ಒಕ್ಕೂಟ ಪೆನ್ ಇಂಟರ್ನ್ಯಾಷನಲ್.
Advertisement