ಬೇಳೆಕಾಳುಗಳ ದರ ನಿಯಂತ್ರಣಕ್ಕೆ ಎಸ್ಮಾ

ಶರವೇಗದಲ್ಲಿ ಏರುತ್ತಿರುವ ಬೇಳೆಕಾಳುಗಳ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಅಗತ್ಯ ವಸ್ತುಗಳ ಕಾಯ್ದೆ (ಎಸ್ಮಾ) ...
ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ
ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ
ನವದೆಹಲಿ:  ಶರವೇಗದಲ್ಲಿ ಏರುತ್ತಿರುವ ಬೇಳೆಕಾಳುಗಳ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಅಗತ್ಯ ವಸ್ತುಗಳ ಕಾಯ್ದೆ  (ಎಸ್ಮಾ) ಜಾರಿ ಮಾಡಿದೆ. ಅದರ ಮೂಲಕವಾಗಿ ಅಧಿಕಾರಿಗಳು ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಅಕ್ರಮ ದಾಸ್ತಾನುಗಳ ಮೇಲೆ ದಾಳಿ ನಡೆಸಲಾಗಿದೆ. ಇದರಿಂದಾಗಿ 5,800 ಟನ್  ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಮತ್ತು ಕಲಬುರಗಿಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ 360 ಟನ್ ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತಿ ಹೆಚ್ಚು ಅಂದರೆ 2,549 ಅನ್ನು ತೆಲಂಗಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದಲ್ಲಿ 2,295, ಆಂಧ್ರಪ್ರದೇಶದಲ್ಲಿ 600, ಮಹಾರಾಷ್ಟ್ರದಲ್ಲಿ 10 ಟನ್ ಗಳಷ್ಟು ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ. ತೊಗರಿಬೇಳೆ ಬೆಲೆ ಪ್ರತಿ ಕೆಜಿಗೆ ರು. 200ಕ್ಕೆ ಏರಿದೆ. ಕಳೆದ ಸಾಲಿನಲ್ಲಿ  ರು.85 ಇದ್ದದ್ದು ಒಂದೇ ವರ್ಷದಲ್ಲಿ ಶೇ.135ರಷ್ಟು ಏರಿಕೆ ಆಗಿರುವುದು ಆತಂಕಕ್ಕೆ ಎಡೆಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ದಾಳಿಗೆ ಮುಂದಾಗಿದೆ.
ಸಂಪುಟ ಕಾರ್ಯದರ್ಶಿ ಸಭೆ: ಈ ನಡುವೆ, ಮಂಗಳವಾರ ಕೇಂದ್ರ ಸಂಪುಟ ಕಾರ್ಯದರ್ಶಿ ಪ್ರದೀಪ್‍ಕುಮಾರ್ ಸಿನ್ಹಾ, ಗ್ರಾಹಕ ವ್ಯವಹಾರಗಳು, ಕೃಷಿ, ವಾಣಿಜ್ಯ ಮತ್ತು ಇತರ ಕಾರ್ಯದರ್ಶಿಗಳ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯ ಸರ್ಕಾರಗಳು ಕಳ್ಳ ದಾಸ್ತಾನುಗಾರರ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸಲಾಯಿತು. ಜತೆಗೆ ಆಮದು ಮಾಡಿಕೊಂಡಿರುವ ತೊಗರಿ ಬೇಳೆಯನ್ನು ಕೇಂದ್ರೀಯ ಭಂಡಾರ್ ಮತ್ತು ಮದರ್ ಡೈರಿಯ ಸಫಲ್ ಮಳಿಗೆ ಗಳ ಮೂಲಕ ದೆಹಲಿಯಲ್ಲಿ ವಿತರಣೆ ಮಾಡುತ್ತಿರುವ ಬಗ್ಗೆಯೂ ಪರಿಶೀಲಿಸಲಾಗಿದೆ. ದೆಹಲಿಯಲ್ಲಿ ಆಮದಾದ ತೊಗರಿಬೇಳೆಯನ್ನು ರು.120ಕ್ಕೆ ಗ್ರಾಹಕರಿಗೆ
ಒದಗಿಸಲಾಗುತ್ತಿದೆ. 
ಅಗತ್ಯವಸ್ತುಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ರಾಜ್ಯ  ಸರ್ಕಾರಗಳಿಗೆ  ನಿರ್ದೇಶನ ನೀಡಿದ್ದೇವೆ. ಹೀಗಾಗಿ, ಐದು ರಾಜ್ಯಗಳಲ್ಲಿ  ದಾಳಿ ನಡೆದಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸಿ. ವಿಶ್ವನಾಥ್ ಹೇಳಿದ್ದಾರೆ. ಕಠಿಣ ಕ್ರಮಗಳಿಂದಾಗಿ ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಲಭ್ಯತೆ ಸುಧಾರಿಸಲಿದ್ದು ಧಾರಣೆ ಇಳಿಯುವ ನಿರೀಕ್ಷೆ ಇದೆ . ಕೇಂದ್ರ ಸೂಚನೆ ಮೇರೆಗೆ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮತ್ತು ತಮಿಳುನಾಡು ದ್ವಿದಳ ಧಾನ್ಯಗಳ ರಫ್ತುದಾರರಿಗೆ ನೀಡಿದ್ದ ದಾಸ್ತಾನು ಮಿತಿ ರಿಯಾಯಿತಿಯನ್ನು ಹಿಂದಕ್ಕೆ ಪಡೆದಿವೆ. ರಾಜ್ಯಗಳಿಗೂ ಆಮದು ಮಾಡಿಕೊಂಡ
ಬೇಳೆಕಾಳು ನೀಡಲು ಕೇಂದ್ರ ಮುಂದಾಗಿದೆ. ಕೇಂದ್ರವು ಕೈಗೊಂಡಿರುವ ಕಠಿಣ ಕ್ರಮಗಳಿಂದಾಗಿ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಲಭ್ಯತೆ ಸುಧಾರಿಸಲಿದ್ದು
ಧಾರಣೆ ಇಳಿಯುವ ನಿರೀಕ್ಷೆಇದೆ.
- ಸಿ ವಿಶ್ವನಾಥ್ ಕೇಂದ್ರ ಗ್ರಾಹಕ ಇಲಾಖೆಗಳ ಕಾರ್ಯದರ್ಶಿ
ಕರ್ನಾಟಕದಲ್ಲೇ ಹೆಚ್ಚು ಏರಿಕೆ
ಬೇಳೆಕಾಳುಗಳ ದರ ಇಡೀ ರಾಷ್ಟ್ರದಲ್ಲೇ ಕರ್ನಾಟಕದಲ್ಲೇ ಅತಿ ಹೆಚ್ಚು ಏರಿಕೆ ಕಂಡಿದೆ. ತೊಗರಿಬೇಳೆ ರು.205ಕ್ಕೆ ಏರಿದ್ದರೆ, ಹೆಸರು ಬೇಳೆ ರು.198ಕ್ಕೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆ ಪ್ರಮಾಣ ಶೇ. 150 ರಷ್ಟಿದೆ. ಬೇಳೆಕಾಳುಗಳ ಬೆಲೆ ಏರಿಕೆ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಿದೆ. ತೊಗರಿ ಬೇಳೆ ಜತೆ ಹೆಸರು ಬೇಳೆ ದರವೂ ಏರಿದೆ. ಹೆಸರು ಬೇಳೆ ದರ ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ ರು.198, ಮಂಗಳೂರಿನಲ್ಲಿ  ರು.187, ಚೆನ್ನೈ ಮತ್ತು ಪುದುಚೇರಿಯಲ್ಲಿ ಕ್ರಮವಾಗಿ ರು.190 ಮತ್ತು ರು.180ಕ್ಕೆ . ಮುಂಬೈ ಮತ್ತು ದೆಹಲಿಯಲ್ಲಿ ರು, 152 ರಿಂದ ರು. 166 ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com