ದೇಶದಿಂದ ಹೊರಗೆ ಅತಿ ಹೆಚ್ಚು ಸಮಯ ಕಳೆದ ಮೊದಲ ಪ್ರಧಾನಿ ಮೋದಿ: ರಾಜ್ ಠಾಕ್ರೆ

ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಮೇಲೆ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ, ದೇಶದ ಹೊರಗೆ ಅತಿ ಹೆಚ್ಚು ಸಮಯ ಕಳೆದ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ

ಮುಂಬೈ: ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಮೇಲೆ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ, ದೇಶದ ಹೊರಗೆ ಅತಿ ಹೆಚ್ಚು ಸಮಯ ಕಳೆದ ಮೊದಲ ಪ್ರಧಾನಿ ಮೋದಿ ಎಂದು ಕುಹಕವಾಡಿದ್ದಾರೆ.

"ನಾವು ಎಂತಹ ಸರ್ಕಾರ ಹೊಂದಿದ್ದೇವೆ? ಕೆಲಸ ಮಾಡುವುದನ್ನು ಬಿಟ್ಟು ಇರುವದೆಲ್ಲವನ್ನೂ ನಿಷೇಧ ಮಾಡುತ್ತಾ ಕುಳಿತಿದ್ದಾರೆ. ದೇಶದ ಹೊರಗೆ ಅತಿ ಹೆಚ್ಚು ಸಮಯ ಕಳೆದ ಮೊದಲ ಪ್ರಧಾನಿಯನ್ನು ನಾವು ಹೊಂದಿದ್ದೇವೆ" ಎಂದು ಠಾಕ್ರೆ ಹೇಳಿದ್ದಾರೆ.

"ಸಲ್ಮಾನ್ ಖಾನ್ 'ಭಜರಂಗಿ ಭಾಯಿಜಾನ್' ೨ನೆ ಭಾಗ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಆಗ ಮೋದಿಯವರನ್ನು ವಿದೇಶದಿಂದ ಹಿಂತಿರುಗಿ ಕರೆತರಲಿದ್ದಾರಂತೆ" ಎಂದು ಪ್ರಧಾನಿಯವರನ್ನು ಕುಚೋದ್ಯ ಮಾಡಿದ್ದಾರೆ.

ಅಕ್ಟೋಬರ್ ೨೦೧೫ ರವರೆಗೆ ಮೋದಿ ಇಲ್ಲಿಯವರೆಗೆ ೨೮ ವಿದೇಶಿ ಪ್ರವಾಸ ಮಾಡಿ ಮುಗಿಸಿದ್ದಾರೆ.

ಮುಂಬೈ ಮತ್ತು ಅಹಮದಾಬಾದ್ ನಡುವೆ ಪ್ರಾರಂಭಿಸಬೇಕೆಂದು ಪ್ರಸ್ತಾವವಿರುವ ಬುಲೆಟ್ ರೈಲಿನ ಅವಶ್ಯಕತೆಯನ್ನು ಪ್ರಶ್ನಿಸಿದ ಠಾಕ್ರೆ ಸೂಪರ್ ಫಾಸ್ಟ್ ರೈಲಿನಿಂದ ಯಾವುದೇ ಉಪಯೋಗವಿಲ್ಲ ಎಂದಿದ್ದಾರೆ.

"ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲಿನ ಅವಶ್ಯಕತೆ ಏನು? ಬೇರೆ ರಾಜ್ಯಕ್ಕೆ ಏಕೆ ಬೇಡ? ಇದರಿಂದಾಗುವ ಉಪಯೋಗವೇ? ಗುಜರಾತಿಗೆ ಹೋಗಿ ಡೋಕ್ಲಾ (ಗುಜರಾತಿ ಖಾದ್ಯ) ತಿಂದು ವಾಪಸ್ ಬರಲೆಂದೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಶಿವಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಬಗ್ಗೆಯೂ ಟೀಕಿಸಿರುವ ಠಾಕ್ರೆ "ಈ ಎರಡು ಪಕ್ಷಗಳು ಸಾರ್ವಜನಿಕವಾಗಿ ಕಿತ್ತಾಡುವುದನ್ನು ನೋಡಿದರೆ, ಗಂಡ ಹೆಂಡಂದಿರೂ ಹೀಗೆ ಕಿತ್ತಾಡುವುದಿಲ್ಲ. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿದೆ ಎನ್ನುತ್ತಾರೆ ಮುಖ್ಯಮಂತ್ರಿ ಹಾಗಾದರೆ ಶಿವಸೇನೆ ಮಂತ್ರಿಗಳನ್ನೇ ಕೇಳಬೇಕು" ಎಂದಿದ್ದಾರೆ.

ಪಾಕಿಸ್ತಾನಿ ಗಜಲ್ ಹಾಡುಗಾರ ಗುಲಾಂ ಅಲಿ ಅವರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ ಶಿವಸೇನೆ ನಿಲುವನ್ನು ಸಮರ್ಥಿಸಿಕೊಂಡ ರಾಜ್, "ಸಂಗೀತಕಾರನಿಗೆ ತೋರಿದ ವಿರೋಧ ಅಲ್ಲ, ಪಾಕಿಸ್ತಾನದಲ್ಲೂ ನಮ್ಮ ಕಲಾವಿದರಿಗೆ ಗೌರವ ಸಿಗುತ್ತದೆಯೇ? ನಮ್ಮ ದೇಶದಲ್ಲೇ ಒಳ್ಳೊಳ್ಳೆ ಪ್ರತಿಭೆಗಳು ಇರಬೇಕಾದರೆ ಬೇರೆ ದೇಶದವರಿಗೆ ಮಣೆ ಹಾಕುವ ಅವಶ್ಯಕತೆ ಇಲ್ಲ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com