
ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಹಗರಣದ ಮೊದಲ ತೀರ್ಪು ಬುಧವಾರ ಹೊರ ಬಿದ್ದಿದ್ದು, ಲೈಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಾನಗರ ಪಾಲಿಕೆಯ ನಾಲ್ವರು ಅಧಿಕಾರಿಗಳು ಸೇರಿದಂತೆ ಐದು ಅಪರಾಧಿಗಳಿಗೆ ದೆಹಲಿ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
2010ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಬೀದಿ ದೀಪ ಅಳವಡಿಕೆ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿ ಸ್ವೇಸ್ಕ ಪವರ್‌ಟೆಕ್ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಪಿ.ಸಿಂಗ್ ಅವರಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ ಇತರೆ ಆರೋಪಿಗಳಾದ ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ.ಕೆ.ಸುಗುಣ್, ಕಾರ್ಯ ನಿರ್ವಾಹಕ ಎಂಜಿನಿಯರ್ ಒ.ಪಿ. ಮಹಾಲ, ಲೆಕ್ಕಾಧಿಕಾರಿ ರಾಜು ವಿ, ಟೆಂಡರ್ ಗುಮಾಸ್ತ ಗುರುಚರಣ್ ಸಿಂಗ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಾಮನ್ವೆಲ್ತ್ ಗೆ ಸಂಬಂಧಿಸಿದ 10 ಪ್ರತ್ಯೇಕ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಅದರಲ್ಲಿ ಈ ಬೀದಿದೀಪ ಅವ್ಯವಹಾರ ಪ್ರಕರಣವೂ ಒಂದಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ದೆಹಲಿಯ ಬೀದಿ ದೀಪ ವ್ಯವಸ್ಥೆಯನ್ನು ಅತ್ಯುನ್ನತ ದರ್ಜೆಗೇರಿಸುವ ಕಾಮಗಾರಿಗಾಗಿ 2008ರಲ್ಲಿ ಟೆಂಡರ್ ಕರೆಯಲಾಗಿತ್ತು.
ಸ್ವೇಸ್ಕ ಪವರ್‌ಟೆಕ್ ಸೇರಿದಂತೆ ಐದು ಕಂಪೆನಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದರೆ ಪಾಲಿಕೆ ಆಯುಕ್ತರು ಈ ಪೈಕಿ ಮೂರು ಕಂಪೆನಿಗಳ ಟೆಂಡರನ್ನು ಮಾತ್ರ ಅನುಮೋದಿಸಿದ್ದರು ಎಂದು ಸಿಬಿಐ ಆಪಾದಿಸಿತ್ತು.
Advertisement