ಹಂತಕರ ಬೇಟೆ ಬಿಟ್ಟು ಆಸ್ತಿ ಕೆದಕುತ್ತಿದೆ ಸಿಐಡಿ

ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆಯೇ? ಪೊಲೀಸರ ತನಿಖೆ ಗಮನಿಸಿದರೆ
ಎಂಎಂ ಕಲಬುರ್ಗಿ
ಎಂಎಂ ಕಲಬುರ್ಗಿ

ಹುಬ್ಬಳ್ಳಿ: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆಯೇ? ಪೊಲೀಸರ ತನಿಖೆ ಗಮನಿಸಿದರೆ ಇಂಥ ಅನುಮಾನ ಮೂಡದೇ ಇರದು. ಹಂತಕರು ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬ ಕಾರಣವೊಡ್ಡಿ, ಭೀಮಾತೀರದಲ್ಲಿ ಶೋಧ ನಡೆಸಲು ಹೋಗಿರುವ ಅವರು, ಆಸ್ತಿ ವಿಚಾರವನ್ನು ಕೆದಕುತ್ತಿದ್ದಾರೆ.

ಇದಕ್ಕಾಗಿ ಮೊದಲ ಮಗಳ ಗಂಡನ ಮನೆಯಾದ ವಿಜಯಪುರ ಜಿಲ್ಲೆಯ ಕೆಲವು ಗ್ರಾಮಗಳಿಗೆ ಹೋಗಿ ತನಿಖೆ ನಡೆಸುತ್ತಿದ್ದಾರೆ. ಈ ಮೂಲಕ ಪ್ರಕರಣದ ನಿಜವಾದ ವಿಚಾರದಿಂದ ದೂರ ಹೋಗುತ್ತಿದ್ದಾರೆ ಎಂಬ ಆತಂಕ ಸ್ವತಃ ಕಲಬುರ್ಗಿ ಅವರ ಮಕ್ಕಳಲ್ಲಿ ಕಾಡುತ್ತಿದೆ.

ಹಂತಕರ ರೇಖಾಚಿತ್ರ ಬಿಡುಗಡೆ ಮಾಡುವಲ್ಲಿ ಮೂರು ದಿನ ಸಮಯ ತೆಗೆದುಕೊಂಡಿದ್ದ ಸಿಐಡಿ, ಕಲಬುರ್ಗಿ ಅವರ ಹತ್ಯೆಯ ಈ ಪ್ರಕರಣದ ತನಿಖೆ ಯಾವ ಮಟ್ಟ ಚುರುಕು ಆಗಬೇಕಿತ್ತೋ ಮತ್ತು ವಿಸ್ತಾರ ಪಡೆದುಕೊಳ್ಳಬೇಕಿತ್ತೋ ಅಷ್ಟು ಆಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದ್ದಾಗಲೇ ಭೀಮಾತೀರ, ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತಿದೆ.

ಸಿಐಡಿ ಒಂದು ತಂಡ (ಓರ್ವ-ಡಿವೈಎಸ್ಪಿ, ಮೂವರು-ಸಿಪಿಐ) ಬುಧವಾರ ಬೆಳಗ್ಗೆ ವಿಜಯಪುರಕ್ಕೆ ತೆರಳಿ ಬೀಡುಬಿಟ್ಟಿದೆ. ಈ ಮೊದಲು ಹುಬ್ಬಳ್ಳಿ ಪೊಲೀಸರ ತಂಡ ಡಾ. ಕಲಬುರ್ಗಿ ಅವರ ಹುಟ್ಟೂರು ಸಿಂದಗಿ ತಾಲೂಕು ಗುಬ್ಬೇವಾಡಿ (ತಾಯಿಯ ತವರು), ಸ್ವಂತ ಊರು ಯರಗಲ್ ಬಿ.ಕೆ., ಹಿರಿಯ ಪುತ್ರಿ ಪೂರ್ಣಿಮಾ ಅವರ ಗಂಡನ ಮನೆ ಇರುವ ಇಂಡಿ ತಾಲೂಕು ತಾಂಬಾ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು.

ಆದಾಗ್ಯೂ ಸಿಐಡಿ ತಂಡ ಪುನಃ ಪುನಃ ಅದೇ ಪ್ರದೇಶದಲ್ಲಿ ಗಿರಕಿ ಹೊಡೆಯುವ ಮೂಲಕ ರಾಜ್ಯದ ಜನತೆಯ ಗಮನವನ್ನು ಬೇರೆಡೆ ಸೆಳೆಯು ಯತ್ನ ಮಾಡುತ್ತಿದೆ. ಇದರ ಜತೆಗೆ, ಇವರಿಗಿದ್ದ ಬೆದರಿಕೆಯ ವಿಚಾರವನ್ನು ಬದಿಗೆ ಸರಿಸಿ, ಕೇವಲ ಆಸ್ತಿ ವಿಚಾರದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುವ ಬಗ್ಗೆ ಸ್ವತಃ ಕಲಬುರ್ಗಿ ಅವರ ಕುಟುಂಬ ಸದಸ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಂಗ್ಲ ವಾಹಿನಿ ಎನ್‍ಡಿಟಿವಿ ಜತೆ ಮಾತನಾಡಿರುವ ಪುತ್ರ ಶ್ರೀವಿಜಯ, `ನನ್ನ ತಂದೆಗೆ ಆಸ್ತಿ ಮೇಲೆ ವ್ಯಾಮೋಹವಿರಲಿಲ್ಲ. ನನ್ನ ತಂದೆ ಮತ್ತು ಅವರ ಸಹೋದರರು ಆಸ್ತಿ ಹೊಂದಿದ್ದರು. ಆದರೆ, ಕಲಬುರ್ಗಿಯವರಾಗಲಿ, ಅವರ ಮಕ್ಕಳಾದ ನಾವಾಗಲಿ ಈ ಆಸ್ತಿ ಮೇಲೆ ಕಿಂಚಿತ್ತೂ ಆಸೆ ಹೊಂದಿರಲಿಲ್ಲ. ನಮ್ಮ ಚಿಕ್ಕಪ್ಪಂದಿರೇ ಆಸ್ತಿ ಕೊಡುವುದಾಗಿ ಮುಂದೆ ಬಂದಿದ್ದರು.

ಅದನ್ನು ನಾವೇ ತಿರಸ್ಕರಿಸಿದ್ದೆವು' ಎಂದು ಹೇಳಿದ್ದಾರೆ. ಅಲ್ಲದೆ, ಕಲಬುರ್ಗಿ ಅವರು ಹಲವು ವರ್ಷಗಳಿಂದ ಕೆಲವು ಹಿಂದೂ ಸಂಘಟನೆಗಳು ಹಾಗೂ ಧಾರ್ಮಿಕ ಮೂಲಭೂತವಾದಿಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದ್ದರು. ಅವರ ಬರಹ ಹಾಗೂ ಹೇಳಿಕೆಗಳಿಗೆ ಸಾಕಷ್ಟು ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು.

ಆದರೆ, ಈ ಕೊಲೆಯ ಹಿಂದೆ ಇವರ ಆಸ್ತಿ ವಿವಾದ ಇದೆ ಎಂಬುದಕ್ಕೆ ಪೂರಕ ಸಾಕ್ಷಿಗಳಿಲ್ಲ. ಹೀಗಿದ್ದರೂ ಪೊಲೀಸರು ಇದರ ಹಿಂದೆ ಬಿದ್ದಿರುವ ಬಗ್ಗೆ ಕಾರಣಗಳು ತಿಳಿಯುತ್ತಿಲ್ಲ. ಮಾಹಿತಿ ನೀಡಲು ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ಎನ್‍ಡಿಟಿವಿ ತನ್ನ ವರದಿಯಲ್ಲಿ ಹೇಳಿದೆ.

ಕಲಬುರ್ಗಿಯವರಿಗೆ ಬೇಡವಾಗಿದ್ದ ಆಸ್ತಿ:
ಡಾ. ಕಲಬುರ್ಗಿ ಅವರ ಊರು ಯರಗಲ್ ಬಿ.ಕೆ. ಗ್ರಾಮದಲ್ಲಿ 46 ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಐವರು ಸಹೋದರರಿಗೆ ಹಂಚಿದಾಗ ಇವರ ಪಾಲಿಗೆ 6 ಎಕರೆ ಬಂದಿತ್ತು. ಅದನ್ನೂ ಅವರು ಬಹು ಹಿಂದೆಯೇ ಸಹೋದರರಿಗೆ ಬಿಟ್ಟುಕೊಟ್ಟಿದ್ದಾರೆ. ಕಲಬುರ್ಗಿ ಅವರ ಹಿರಿಯ ಪುತ್ರಿ ಪೂರ್ಣಿಮಾ ಅವರನ್ನು ಇಂಡಿ ತಾಲೂಕು ತಾಂಬಾ ಗ್ರಾಮದ ಅಂಬರೀಷ್ ಅಳಗುಂಡಗಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು.

ಪತಿಯ ಆಕಸ್ಮಿಕ ನಿಧನದ ಬಳಿಕ ಆಸ್ತಿ ಹಂಚಿಕೆ ವಿಷಯ ಮುಗಿದಿದೆ. ಪೂರ್ಣಿಮಾ ಧಾರವಾಡದಲ್ಲಿ ತಂದೆಯ ಮನೆಯಲ್ಲಿ ಇದ್ದಾರೆ. ಇಷ್ಟೇ ಅಲ್ಲ, ನಿಜವಾಗಿ ಆಸ್ತಿ ಹಂಚಿಕೆ ವಿವಾದವಿದ್ದದ್ದು ಪುತ್ರಿ ಮತ್ತು ಆಕೆಯ ಗಂಡನ ಮನೆಯವರ ಜತೆಗೆ. ಈ ವಿವಾದಕ್ಕೂ ಕಲಬುರ್ಗಿಯವರಿಗೂ ಯಾವುದೇ ಸಂಬಂಧವಿರಲಿಲ್ಲ. ಈ ವಿಚಾರದಲ್ಲಿ ಪೊಲೀಸರ ತನಿಖೆಯೇನು ಎಂಬ ಬಗ್ಗೆ ಕುಟುಂಬ ಸದಸ್ಯರಿಗೇ ಅಚ್ಚರಿ ತಂದಿದೆ.

ಬಾಂಬ್ ಸ್ಕ್ವಾಡ್ಪರಿಶೀಲನೆ: ಈ ಮಧ್ಯೆ ಗುರುವಾರ ಬಾಂಬ್ ಸ್ಕ್ವಾಡ್ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿತು. ಕಲಬುರ್ಗಿ ಅವರ ಮನೆ ಇರುವ ಧಾರವಾಡದ ಕಲ್ಯಾಣ ನಗರದ 9ನೇ ಕ್ರಾಸ್‍ನ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಪರಿಕರಗಳನ್ನು ಇಟ್ಟು ಪರಿಶೀಲನೆ ನಡೆಸಿತು. ಮನೆ ಪಕ್ಕದಲ್ಲಿ ಇರುವ ಖಾಲಿ ನಿವೇಶನದಲ್ಲಿ ಕೊಲೆಗೆ ಸಂಬಂಧಿಸಿದಂತೆ ಯಾವುದಾದರು ಕುರಹುಗಳು ಸಿಗಬಹುದೇ ಎಂದು ತಂಡ ತಡಕಾಡಿತು.

ಆದರೆ, ಯಾವುದೇ ತರಹದ ಮಾಹಿತಿ, ಕುರುಹು ಸಿಗಲಿಲ್ಲ. ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಹತ್ಯೆ ಪ್ರಕರಣ ಭೇದಿಸಲು ಸಿಐಡಿ ತಂಡ ಧಾರವಾಡದಲ್ಲೇ 2 ತಂಡಗಳಾಗಿ ವಿಚಾರಣೆ ನಡೆಸುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೂ ಕಲಬುರ್ಗಿ ಅವರ ಮನೆ ಇರುವ ಓಣಿ, ಕರ್ನಾಟಕ ವಿಶ್ವವಿದ್ಯಾಲಯ, ಕಲ್ಯಾಣ ನಗರದ 8 ಮತ್ತು 10ನೇ ಕ್ರಾಸ್‍ನಲ್ಲಿ ಹಲವು ರೀತಿ ಪರಿಶೀಲನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com