ತಾಯಿ ಜನ್ಮ ಕೊಡುತ್ತಾಳೆ, ಶಿಕ್ಷಕ ಜೀವನ ಕೊಡುತ್ತಾನೆ: ಮೋದಿ

ತಾಯಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ, ಆದರೆ ಶಿಕ್ಷಕ ಆ ಮಕ್ಕಳಿಗೆ ಜೀವನ ಕೊಡುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ತಾಯಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ, ಆದರೆ ಶಿಕ್ಷಕ ಆ ಮಕ್ಕಳಿಗೆ ಜೀವನ ಕೊಡುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ನಾಳೆ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ದೆಹಲಿಯ ಮಾಣಿಕ್ ಷಾ ಆಡಿಟೋರಿಯಂನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 800 ವಿದ್ಯಾರ್ಥಿಗಳು ಹಾಗೂ 60 ಶಿಕ್ಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ನಾನು ವಿದ್ಯಾರ್ಥಿಯಾಗಿ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ವಿದ್ಯಾರ್ಥಿಗಳು ಶಿಕ್ಷಕರ ಗೌರವ ಹೆಚ್ಚಿಸುತ್ತಾರೆ ಎಂದರು.

ನಾವು ಡಾ.ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಶಿಕ್ಷಕರ ದಿನ ಆಚರಿಸುತ್ತೇವೆ. ಏಕೆಂದರೆ ಅವರು ಒಬ್ಬ ಅತ್ಯುತ್ತಮ ಶಿಕ್ಷಕರಾಗಿದ್ದರು. ಅಲ್ಲದೆ ಅವರು ಏನೇ ಸಾಧನೆ ಮಾಡಿದರೂ ನಾನು ಶಿಕ್ಷಕ ಎಂದು ಹೇಳಿಕೊಳ್ಳುತ್ತಿದ್ದರು. ಉತ್ತಮ ಸಮಾಜದಲ್ಲಿ ಶಿಕ್ಷಕರ ಸ್ಥಾನ ಉನ್ನತ ಮಟ್ಟದಲ್ಲಿರುತ್ತೆ. ಏಕೆಂದರೆ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ದೇವರು ಎಂದರು.

ಶಿಕ್ಷಕರ ಮಹತ್ವದ ಬಗ್ಗೆ ಮತಾನಾಡಿದ ಮೋದಿ, ಇಂಜಿನಿಯರ್‌ಗಳು, ಡಾಕ್ಟರ್‌ಗಳು, ವಿಜ್ಞಾನಿಗಳು ಸೇರಿದಂತೆ ಎಲ್ಲಾ ವೃತ್ತಿಪರರ ಹಿಂದೆ ವಿದ್ಯಾರ್ಥಿಗಳೇ ಆಗಿದ್ದಾರೆ. ಇವರೆಲ್ಲರೂ ಸಮಾಜಕ್ಕೆ ಶಿಕ್ಷಕರು ನೀಡಿದ ಕೊಡುಗೆ. ಇಷ್ಟೆಲ್ಲಾ ಸೃಷ್ಟಿಸಿದರೂ ಶಿಕ್ಷಕರು ಶಿಕ್ಷಕರಾಗಿಯೇ ಇರುತ್ತಾರೆ. ಅಂತಹ ಶಿಕ್ಷಕರನ್ನು ನಾವು ಎಂದಿಗೂ ಗೌರವಿಸಬೇಕು ಎಂದು ಮೋದಿ ಮಕ್ಕಳಿಗೆ ಕಿವಿಮಾತು ಹೇಳಿದರು. ಅಲ್ಲದೆ ನಮ್ಮ ಸರ್ಕಾರ ಕೂಡ ಎಲ್ಲಾ ಶಿಕ್ಷಕರನ್ನು ಗೌರವಿಸುತ್ತದೆ. ಈ ದಿನ ನಾನು ವಿಶ್ವದ ಎಲ್ಲಾ ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಶಿಕ್ಷಕರು ಎಂದಿಗೂ ನಿವೃತ್ತಿಯಾಗಲ್ಲ. ಶಿಕ್ಷಣದ ಜತೆ ಇರುತ್ತಾರೆ. ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಸಹ ತಾನು ಶಿಕ್ಷಕ ಎಂದೇ ಗುರುತಿಸಿಕೊಳ್ಳುತ್ತಿದ್ದರು. ಕಡೆಯವರೆಗೂ ಡಾ.ಕಲಾಂ ಶಿಕ್ಷಕರಾಗಿಯೇ ಇದ್ದರು. ಕಲಾಂ ರಾಷ್ಟ್ರಪತಿಯಾದಾಗಲೂ ಉಪನ್ಯಾಸ ಬಿಟ್ಟಿರಲಿಲ್ಲ.

ಹೆಚ್ಚು ಅಂಕ ಪಡೆಯುವುದೇ ದೊಡ್ಡ ಸಾಧನೆಯಲ್ಲ. ಅಂಕ ಗಳಿಸುವುದಷ್ಟೇ ವಿದ್ಯಾರ್ಥಿಗಳ ಗುರಿಯಾಗಬಾರದು. ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಬೆಂಬಲಿಸುವ ಕೆಲಸವಾಗವಾಗಬೇಕು. ಮಕ್ಕಳು 'ರೋಬೋ' ರೀತಿ ಆಗುವುದನ್ನು ನಾವು ತಡೆಯಬೇಕು ಎಂದು ಪ್ರಧಾನಿ ಪೋಷಕರಿಗೂ ಸಲಹೆ ನೀಡಿದರು.

ದೇಶದಲ್ಲಿ ಉತ್ತಮ ಶಿಕ್ಷಕರ ಕೊರತೆ ಗೊತ್ತಿರುವ ವಿಚಾರ, ಆದರೂ ಯುವಕರು ಏಕೆ ಶಿಕ್ಷಕ ವೃತ್ತಿಗೆ ಬರುತ್ತಿಲ್ಲ. ಅವರನ್ನು ಶಿಕ್ಷಕ ವೃತ್ತಿಗೆ ಕರೆತರಲು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಬೆಂಗಳೂರಿನ ವಿದ್ಯಾರ್ಥಿ ಆತ್ಮಿಕ್ ಪ್ರಧಾನಿಯನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ದೇಶದಲ್ಲಿ ತುಂಬಾ ಉತ್ತಮ ಶಿಕ್ಷಕರಿದ್ದಾರೆ. ಇಂದಿನ ಕಾರ್ಯಕ್ರಮ ಶಿಕ್ಷಕರು ಹಾಗೂ ಮಕ್ಕಳಿಗೆ ಸ್ಪೂರ್ತಿಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com