ಮೇಯರ್ ಚುನಾವಣೆ ಪ್ರಕ್ರಿಯೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ: ಆರ್.ಅಶೋಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಚುನಾವಣೆ ಪ್ರಕ್ರಿಯೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಬಿಜೆಪಿ ನಾಯಕ ಆರ್.ಅಶೋಕ್...
ಆರ್.ಅಶೋಕ್ (ಸಂಗ್ರಹ ಚಿತ್ರ)
ಆರ್.ಅಶೋಕ್ (ಸಂಗ್ರಹ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಚುನಾವಣೆ ಪ್ರಕ್ರಿಯೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.

ಬಿಬಿಎಂಪಿ ಮೇಯರ್ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೇಯರ್ ಚುನಾವಣೆ ರಾಜಕೀಯ ದೊಂಬರಾಟವಾಗಿದೆ. ಬೆಂಗಳೂರಿನ ಜನ ಬಿಜೆಪಿ ಪರವಾಗಿ ತೀರ್ಪು ನೀಡಿದ್ದರು. ಅಲ್ಲದೆ ಬಿಜೆಪಿ ಮೇಯರ್ ಆಗಬೇಕು ಎಂದು ಬಯಸಿದ್ದರು. ಆದರೆ ಕಾಂಗ್ರೆಸ್ ಜನರ ತೀರ್ಪಿಗೆ ದ್ರೋಹ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಎಂದರು.

ಇಂದು ನಡೆದ ಮೇಯರ್ ಚುನಾವಣೆ ಪೂರ್ಣ ಪ್ರಮಾಣದ್ದಲ್ಲ ಎಂದಿರುವ ಅಶೋಕ್, ಇದರ ವಿರುದ್ಧ ನಾವು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಒಂದು ವೇಳೆ ಹೈಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗಲು ಬಿಜೆಪಿ ಸಿದ್ಧವಿದೆ ಎಂದರು.

ಬೆಂಗಳೂರು ಅಭಿವೃದ್ದಿ ಪರ ಬಿಜೆಪಿ ಕೆಲಸ ಮಾಡಲಿದೆ. ಆದರೆ ಬಿಬಿಎಂಪಿ ವಿಭಜನೆ ಮಾಡಿದ್ರೆ ಉಗ್ರ ಹೋರಾಟ ಮಾಡುವುದಾಗಿ ಅಶೋಕ್ ಎಚ್ಚರಿಸಿದ್ದಾರೆ.

ಇನ್ನು ಕೇಂದ್ರ ಕಾನೂನು ಡಿ.ವಿ.ಸದಾನಂದಗೌಡ ಅವರು ಸಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರು ಜನ ಬಿಜೆಪಿ ಮೇಲೆ ನಂಬಿಕೆ ಇಟ್ಟು ಹೆಚ್ಚು ಸ್ಥಾನಗಳನ್ನು ನೀಡಿದ್ದರು. ಹೀಗಾಗಿ ಮೇಯರ್ ಸ್ಥಾನ ನ್ಯಾಯಯುತವಾಗಿ ಬಿಜೆಪಿ ಸಿಗಬೇಕಿತ್ತು. ಆದರೆ ಕಾಂಗ್ರೆಸ್ ಬೆಂಗಳೂರಿನ ಜನತೆಗೆ ಮೋಸ ಮಾಡಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com