
ರಾಯಪುರ: ತೀವ್ರ ನಕ್ಸಲ್ ಚಟುವಟಿಕೆಯ ಚತ್ತೀಸ್ ಘರ್ ನ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ಪೊಲೀಸ್ ಜವಾನನೊಬ್ಬನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಇಂದು ಆಪಾದಿಸಿದ್ದಾರೆ.
ಪಾಂಡು ರಾಮ್ ಕುಡಿಯಂ ಎಂದು ಗುರುತಿಸಲಾಗಿರುವ ಉಪ ಕಾಂಸ್ಟೆಬಲ್ ನನ್ನು, ಫಾರ್ಸೆಘರ್ ಪೊಲೀಸ್ ಠಾಣೆಗೆ ಸೇರುವ ದಟ್ಟ ಅರಣ್ಯದಿಂದ ನೆನ್ನೆ ಸಂಜೆ ಅಪಹರಿಸಲಾಗಿದೆ ಎಂದು ಬಿಜಾಪುರದ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಕಲ್ಯಾಣ್ ಎಲೆಸೇಲ ತಿಳಿಸಿದ್ದಾರೆ. ತಮ್ಮ ಅತ್ತೆಯವರ ಕೊನೆಯ ವಿಧಿಗಳನ್ನು ಪೂರೈಸಿ ಈ ಉಪ ಕಾಂಸ್ಟೆಬಲ್ ಪಾಲ್ಮೆಂಡ್ರಿ ಗ್ರಾಮದಿಂದ ಫಾರ್ಸೆಘರ್ ಗೆ ಹಿಂತಿರುಗುತ್ತಿದ್ದರು ಎಂದು ತಿಳಿಯಲಾಗಿದೆ.
"ಕುಡಿಯಂ ದ್ವಿಚಕ್ರ ವಾಹನದಲ್ಲಿ ಹಿಂದಿರುಗುವಾಗ ತಡೆದ ನಕ್ಸಲರು ಅವರನ್ನು ಅಪಹರಿಸಿ ದಟ್ಟಾರಣ್ಯಕ್ಕೆ ಕರೆದೊಯ್ದಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಈ ಘಟನೆ ನಡೆದಿದೆ ಎಂದು ಹೇಳಲಾದ ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕಳುಹಿಸಲಾಗಿದ್ದು ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಪೊಲೀಸ್ ನ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಬಿಜಾಪುರ ಜಿಲ್ಲೆಯಲ್ಲಿ ಜುಲೈ ೧೪ ರಂದು ನಕ್ಸಲರು ನಾಲ್ಕು ಜನ ಉಪ ಕಾಂಸ್ಟೆಬಲ್ ಗಳನ್ನು ಅಪಹರಿಸಿ ಮುಂದಿನ ದಿನ ಕೊಂದು ಹಾಕಿದ್ದರು. ಹಾಗೆಯೇ ಕಳೆದ ತಿಂಗಳು ಸುಕ್ಮ ಜಿಲ್ಲೆಯಿಂದ ಮತ್ತೊಬ್ಬ ಉಪ ಕಾಂಸ್ಟೆಬಲ್ ನನ್ನು ಮಾವೋವಾದಿಗಳು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು.
Advertisement