ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವಿರೋಧಿಸಿ ಜೆಡಿಎಸ್ ಸೋಮವಾರ ರಾಜಭವನದವರೆಗೆ ಪಾದಾಯಾತ್ರೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿತು.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ನೇತ್ರತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಕಾರ್ಯಕರ್ತರು ಇಂದು ಬೆಳಗ್ಗೆ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ರಾಜಭವನ ಚಲೋ ಮೆರವಣಿಗೆ ನಡೆಸಿದರು.
ಬಳಿಕ ಕೆಲವು ಶಾಸಕರೊಂದಿಗೆ ರಾಜಭವನಕ್ಕೆ ಆಗಮಿಸಿದ ದೇವೇಗೌಡರು, ರಾಜ್ಯಪಾಲರ ಭೇಟಿಗಾಗಿ ಸುಮಾರು 45 ನಿಮಿಷಗಳ ಕಾಲ ಕಾದು ಕುಳಿತರು. ಆದರೂ ರಾಜ್ಯಪಾಲರು ಮಾಜಿ ಪ್ರಧಾನಿಯನ್ನು ಭೇಟಿ ಮಾಡಲಿಲ್ಲ. ಹೀಗಾಗಿ ರಾಜಭವನದ ಸಿಬ್ಬಂದಿಗೆ ಎಸಿಬಿ ರದ್ದುಗೊಳಿಸುವಂತೆ ಮನವಿ ನೀಡಿ ವಾಪಸ್ಸಾದರು.
ಎಸಿಬಿ ರಚನೆ ವಿರೋಧಿಸುವ ಬ್ಯಾನರ್‌ಗಳು ಪೋಸ್ಟರ್‌ಗಳ ಹಿಡಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೂಡಲೇ ಎಸಿಬಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಶಾಸಕರಿಗೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ: ದೇವೇಗೌಡ ಗರಂ
ರಾಜಭವನ ಭೇಟಿ ವೇಳೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಮಾತ್ರ ಒಳಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು ಹೋರತು ಉಳಿದ್ಯ ಯಾವ ಶಾಸಕರಿಗೂ ಅವಕಾಶ ನೀಡಲಿಲ್ಲ. ಇದರಿಂದ ಕೆಂಡಾ ಮಂಡಲರಾದ ದೇವೇಗೌಡರು ರಾಜಭವನದ ಭದ್ರತಾ ಸಿಬಂದಿಗಳ ವಿರುದ್ದ ಕಿಡಿ ಕಾರಿದರು. ಇದು ಕರ್ನಾಟಕ ಗುಜರಾತ್ ಅಲ್ಲ. ಶಾಸಕರೇನು ಟೆರರಿಸ್ಟಾ ಎಂದು ಪ್ರಶ್ನಿಸಿದರು.