
ನವದೆಹಲಿ: "ನಾವು ಭರವಸೆ ನೀಡಿದಂತೆ ಅತಿ ಕಡಿಮೆ ಸಮಯದಲ್ಲಿಯೇ ಮದ್ಯ ನಿಷೇಧ ಜಾರಿಗೆ ತಂದಿದ್ದೇವೆ" ಎಂದು ಬಿಹಾರದ ಆಡಳಿತ ಸರ್ಕಾರದ ಮೈತ್ರಿ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ತಿಳಿಸಿದೆ.
"ಜನರಿಗೆ ಅದರಲ್ಲೂ ಮಹಿಳೆಯರಿಗೆ ಮದ್ಯ ನಿಷೇಧಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅತಿ ಕಡಿಮೆ ಸಮಯದಲ್ಲಿ ಇದನ್ನು ಸಾಕಾರಗೊಳಿಸಿದ್ದೇವೆ" ಎಂದು ಆರ್ ಜೆ ಡಿ ವಕ್ತಾರ ಮನೋಜ್ ಝಾ ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲ ರೀತಿಯ ಮದ್ಯವನ್ನು ನಿಷೇಧಿಸಿರುವುದಾಗಿ ಮಂಗಳವಾರ ಬಿಹಾರ ಮುಖ್ಯಮಂತ್ರಿ ಘೋಷಿಸಿದ್ದರು.
ಇದಕ್ಕೂ ಮುಂಚಿತವಾಗಿ ದೇಶೀಯ ಮದ್ಯವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು ಮತ್ತು ಮಂಗಳವಾರ ಭಾರತದಲ್ಲಿ ಉತ್ಪಾದಿಸಲಾಗುವ ವಿದೇಶಿ ಮದ್ಯಕ್ಕೂ ನಿಷೇಧ ಹೇರಿದೆ.
"ಸರಳವಾಗಿ ಇದು ಎಲ್ಲ ರೀತಿಯ ಮದ್ಯದ ಮೇಲೆ ಹೇರಿರುವ ನಿಷೇಧ. ಈ ಹಿಂದೆ ಮಾಡಿದ್ದ ನಿಷೇಧಕ್ಕೆ ತಾರ್ಕಿಕ ವಿಸ್ತರಣೆ" ಎಂದು ಕೂಡ ಝಾ ಹೇಳಿದ್ದಾರೆ.
ಗುಜರಾತ್, ನಾಗಾಲ್ಯಾಂಡ್ ಮತ್ತು ಮಣಿಪುರದ ನಂತರ ಈಗ ಸಂಪೂರ್ಣ ಮದ್ಯಮುಕ್ತವಾಗಿರುವ ನಾಲ್ಕನೇ ರಾಜ್ಯವಾಗಿದೆ ಬಿಹಾರ.
Advertisement