
ಶ್ರೀನಗರ: ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್ ಐ ಟಿ) ಜಟಾಪಟಿ ಮುಂದುವರೆದಿದ್ದು, ಕಾಶ್ಮೀರಿಯೇತರ ವಿದ್ಯಾರ್ಥಿಗಳು ಗುರುವಾರ ತರಗತಿಗಳಿಂದ ದೂರ ಉಳಿದಿದ್ದಾರೆ.
ಉದ್ವಿಗ್ನತೆ ತಿಳಿಗೊಳಿಸಲು ಹಾಗೂ ಕಾಶ್ಮೀರಿಯೇತರ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಲು ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಕೂಡ ಗುರುವಾರ ಕಾಲೇಜಿಗೆ ಆಗಮಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಕೆ ರಾಜೆಂದ್ರ ಕುಮಾರ್ ಕೂಡ ಕ್ಯಾಂಪಸ್ಸಿಗೆ ಭೇಟಿ ನೀಡಿದ್ದರು.
ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳು ಹಿಂಸೆಯಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯವಾಗಿ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಸೇವಾ ನಿರತ ಸಾರ್ವಜನಿಕ ಸಿಬ್ಬಂದಿಯ ಕೆಲಸಕ್ಕೆ ತಡೆ ಒಡ್ಡಿದ ಆರೋಪದ ಮೇಲೆ ಎರಡು ಎಫ್ ಐ ಆರ್ ಗಳನ್ನು ನಿಗೀನ್ ಪೋಲಿ ಠಾಣೆಯಲ್ಲಿ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸೀಮಾ ಸುರಕ್ಷಾ ಬಲ (ಎಸ್ ಎಸ್ ಬಿ) ಪಡೆಗಳು ಕ್ಯಾಂಪಸ್ಸಿನಲ್ಲಿ ಬೀಡು ಬಿಟ್ಟಿದ್ದು, ದ್ವಾರಗಳಲ್ಲಿ ಪ್ರಾದೇಶಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ತಮ್ಮ ಪೋಷಕರ ಬಳಿ ತೆರಳ ಬಯಸುವ ವಿದ್ಯಾರ್ಥಿಗಳು, ಹೊರ ಹೋಗಬೇಕಿದ್ದಲ್ಲಿ ಪೋಷಕರ ದೂರವಾಣಿ ಸಂಖ್ಯೆ ನೀಡಿ ಪರವಾನಗಿ ಪಡೆಯಬೇಕೆಂಬ ಆದೇಶವನ್ನು ಎನ್ ಐ ಟಿ ಆಡಳಿತ ಮಂಡಳಿ ಹೊರಡಿಸಿದೆ.
Advertisement