ಅಜಿತ್ ದೋವಲ್
ಅಜಿತ್ ದೋವಲ್

ಅಬ್ದುಲ್ ಬಸಿತ್ ಹೇಳಿಕೆ ತಳ್ಳಿ ಹಾಕಿ ಇಲ್ಲವೇ ಪರಿಣಾಮ ಎದುರಿಸಲು ಸಿದ್ಧರಾಗಿ

ಭಾರತದೊಂದಿಗೆ ಶಾಂತಿ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಹೇಳಿಕೆ ಹಿನ್ನಲೆಯಲ್ಲಿ ಭಾರತದ...
Published on
ನವದೆಹಲಿ: ಭಾರತದೊಂದಿಗೆ ಶಾಂತಿ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಹೇಳಿಕೆ ಹಿನ್ನಲೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.
ಜನವರಿ 2 ರಂದು ನಡೆದ ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ ಬಸಿತ್ ಅವರು, ಭಾರತದ ಎನ್‌ಐಎ ತನಿಖೆಗಾಗಿ ಪಾಕಿಸ್ತಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ . ಬಸಿತ್ ಅವರ ಈ ಹೇಳಿಕೆ ಹಿನ್ನಲೆಯಲ್ಲಿ ಪಾಕಿಸ್ತಾನದ ಅಧಿಕಾರಿ ನಸೀರ್ ಖಾನ್ ಜಂಜುವಾ ಅವರಿಗೆ ಭಾನುವಾರ ರಾತ್ರಿ ದೋವಲ್ ಫೋನ್ ಮಾಡಿದ್ದಾರೆ.
ಈ ಫೋನ್ ಸಂಭಾಷಣೆಯಲ್ಲಿ ದೋವಲ್ ಅವರು ಪಠಾಣ್‌ಕೋಟ್ ಉಗ್ರ ದಾಳಿಯ ತನಿಖೆ ಅನ್ಯೋನ್ಯತೆಗೆ ಸಂಬಂಧಪಟ್ಟದ್ದಲ್ಲ, ಅದು ಸಹಕಾರಕ್ಕೆ ಸಂಬಂಧಪಟ್ಟಿದ್ದು ಎಂದಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ ದೋವಲ್ ಜಂಜುವಾ ಅವರಲ್ಲಿ, ಪಾಕಿಸ್ತಾನ ತಮ್ಮ ರಾಯಭಾರಿ ಬಸಿತ್ ಅವರ ಹೇಳಿಕೆಯನ್ನು ತಿರಸ್ಕರಿಸಬೇಕು ಮತ್ತು ಈ ಬಗ್ಗೆ  ಪಾಕ್ ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿರುವುದಾಗಿ ಉಲ್ಲೇಖಿಸಿವೆ. 
ಒಂದು ವೇಳೆ ಪಾಕಿಸ್ತಾನ ಈ ರೀತಿ ಮಾಡದೇ ಇದ್ದರೆ ಪಾಕಿಸ್ತಾನದೊಂದಿಗಿರುವ ಸಂಬಂಧದ ಬಗ್ಗೆ ಭಾರತ ಕಠಿಣ ನಿಲುವು ಅನುಸರಿಸಬೇಕಾಗುತ್ತದೆ ಎಂದು ದೋವಲ್ ಎಚ್ಚರಿಕೆ ನೀಡಿರುವುದಾಗಿ ಸುದ್ದಿಯಲ್ಲಿ ಹೇಳಲಾಗಿದೆ.
ಆದಾಗ್ಯೂ, ದೋವಲ್ ಪ್ರಶ್ನೆಗೆ ಪಾಕ್ ಉತ್ತರಿಸಿದ ನಂತರವೇ ಈ ವರ್ಷಾಂತ್ಯದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕೋ ಬೇಡವೋ ಎಂಬುದರ ಬಗ್ಗೆಯೂ ಭಾರತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com