ಪುತ್ರ ವ್ಯಾಮೋಹ ಆರೋಪ: ಕಂಪನಿ ನಿರ್ದೇಶಕ ಸ್ಥಾನಕ್ಕೆ ಸಿಎಂ ಪುತ್ರ ರಾಜಿನಾಮೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪುತ್ರ ವ್ಯಾಮೋಹದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಕಿರಿಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪುತ್ರ ವ್ಯಾಮೋಹದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರ ಕಿರಿಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಬುಧವಾರ ರಾಜಿನಾಮೆ ನೀಡಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಕಚೇರಿ ಹೊಂದಿದ್ದು, ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್ ಆರಂಭಿಸಲು ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರ ಕುಟುಂಬ ಸರ್ಕಾರದೊಂದಿಗೆ ಯಾವುದೇ ಉದ್ಯಮದಲ್ಲಿ ಪಾಲ್ಗೊಳ್ಳುವುದಾಗಲಿ ಅಥವಾ ಸರ್ಕಾರಕ್ಕೆ ಯಾವುದೇ ಸೇವೆ ಒದಗಿಸುವಂತಿಲ್ಲ ಎಂಬ ನೀತಿ ಸಂಹಿತೆ ಇದೆ. ಆದರೆ ನಿಯಮ ಮೀರಿ ಸಿಎಂ ಪುತ್ರನ ಸಂಸ್ಥೆಗೆ ಡಯಾಗ್ನೋಸ್ಟಿಕ್ ಘಟಕ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಯತೀಂದ್ರ ಅವರು ಕಂಪನಿಯಿಂದ ಹೊರ ಬಂದಿದ್ದಾರೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆ ಆವರಣದಲ್ಲಿ ಯತೀಂದ್ರ ಮಾಲೀಕತ್ವದ ಕಂಪೆನಿ ಸೂಪರ್ ಸ್ಪೆಷಾಲಿಟಿ ಲ್ಯಾಬ್ ಮತ್ತು ಡಯಾಗ್ನಸ್ಟಿಕ್ ಕೇಂದ್ರ ತೆರೆಯಲು ಮುಂದಾಗಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆ ಕಟ್ಟಡದ ನೆಲ ಅಂತಸ್ತಿನಲ್ಲಿ ಈ ಕೇಂದ್ರ ತಲೆ ಎತ್ತಲಿದೆ.
ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಎಂಬ ಹೆಸರಿನ ಕಂಪೆನಿ ಅಗ್ಗದ ದರದಲ್ಲಿ ರೋಗಿಗಳಿಗೆ ಡಯಾಗ್ನಸ್ಟಿಕ್ಸ್ ಸೇವೆಗಳನ್ನು ಒದಗಿಸುವ ಭರವಸೆ ನೀಡಿದ್ದು, ಈ ತಿಂಗಳ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ.
2009 ರಲ್ಲಿ ಬೆಂಗಳೂರು ಕಂಪೆನಿಗಳ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಣಿಯಾಗಿರುವ ಮ್ಯಾಟ್ರಿಕ್ಸ್ ಇಮೆಜಿಂಗ್ ಸಲ್ಯೂಷನ್ ಸಂಸ್ಥೆಗೆ ಇಬ್ಬರು ಮಾಲೀಕರಾಗಿದ್ದಾರೆ. ಅದರಲ್ಲಿ ಒಬ್ಬರು ಡಾ ಯತೀಂದ್ರ ಸಿದ್ಧರಾಮಯ್ಯ ಆದರೆ, ಮತ್ತೊಬ್ಬರು ಡಾ. ಸಿ.ಎಂ. ರಾಜೇಶ್‌ಗೌಡ.
ರಾಜ್ಯ ಸರ್ಕಾರ ಏ. 7 ರಂದು ಪೇಸ್‌ಬುಕ್‌ನಲ್ಲಿ ತಿಳಿಸಿರುವ ಮಾಹಿತಿಯಂತೆ ಈ ಪ್ರಯೋಗಾಲಯ ಮ್ಯಾಟ್ರಿಕ್ ಸಲ್ಯೂಷನ್ಸ್ ಎಂಬ ಖಾಸಗಿ ಪ್ರಯೋಗಾಲಯದ ಪಾಲುಗಾರಿಕೆಯಲ್ಲಿ ನಡೆಯಲಿದೆ. ಖಾಸಗಿ ಕಂಪೆನಿ ಯಂತ್ರೋಪಕರಣಗಳನ್ನು ಒದಗಿಸಿದರೆ ಸರ್ಕಾರ ಆಸ್ಪತ್ರೆ ಆವರಣದಲ್ಲಿ ಅದಕ್ಕೆ ಅಗತ್ಯವಿರುವ ಸ್ಥಳಾವಕಾಶ ನೀಡಲಿದೆ ಎಂದು ಹೇಳಲಾಗಿದೆ.
ಈಗಿರುವ ಮಾನವಶಕ್ತಿ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಪಾಲುಗಾರಿಕೆಯಲ್ಲಿ ತಲೆ ಎತ್ತಲಿರುವ ಹೊಸ ಪ್ರಯೋಗಾಲಯದಿಂದ ರೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಹೇಳಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ. ಪಿ.ಜಿ. ಗಿರೀಶ್ ಅವರು, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 2015ರ ಅಕ್ಟೋಬರ್ ತಿಂಗಳಲ್ಲಿ ಕರೆದಿದ್ದ ಇ-ಟೆಂಡರ್ ಪ್ರಕ್ರಿಯೆ ಅನ್ವಯ ಆಸ್ಪತ್ರೆ ಖಾಸಗಿ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com