ಮುಂಬೈ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟು ಎದುರಾಗಿದೆ. ಜಾರಿ ನಿರ್ದೇಶನಾಲಯ(ಇಡಿ)ದ ಮನವಿ ಹಿನ್ನೆಲೆಯಲ್ಲಿ ಮುಂಬೈ ವಿಶೇಷ ಕೋರ್ಟ್ ಸಾಲದ ದೊರೆಯ ವಿರುದ್ಧ ಸೋಮವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದು, ಅದನ್ನು ಮರು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ವಿರುದ್ಧ ಮುಂಬೈನ ಪಿಎಂಎಲ್ ಎ ಕೋರ್ಟ್ ಇಂದು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಐಡಿಬಿಐ ಬ್ಯಾಂಕ್ ನಿಂದ ಪಡೆದ 900 ಕೋಟಿ ರುಪಾಯಿ ಸಾಲವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಮೂರು ಬಾರಿ ಸಮನ್ಸ್ ನೀಡಿದರೂ ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಜಾಮೀನು ರಹಿತ ವಾರಂಟ್ ಜಾರಿ ಮಾಡುವಂತೆ ಇಡಿ ಮನವಿ ಮಾಡಿತ್ತು.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಿತ್ತು.
ಕಳೆದ ವರ್ಷ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇಡಿ ವಿಜಯ್ ಮಲ್ಯ ವಿರುದ್ಧ ಹಣ ದುರ್ಬಳಕೆ ಪ್ರಕರಣ ದಾಖಲಿಸಿಕೊಂಡಿದೆ.