
ಬೆಂಗಳೂರು: ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರು ಸ್ವಯಂಪ್ರೇರಿತವಾಗಿ ಮುಷ್ಕರ ಹಿಂಪಡೆದಿದ್ದು, ನಾಳೆಯಿಂದ ಮೌಲ್ಯಮಾಪನಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಪಿಯುಸಿ ಪರೀಕ್ಷೆ ಬರೆದು ಆತಂಕದಲ್ಲಿದ್ದ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ. ಈ ವಿಷಯವನ್ನು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಘೋಷಿಸಿದ್ದಾರೆ.
ಇದಕ್ಕೂ ಪೂರ್ವವಾಗಿ ಪದವಿ ವೂರ್ವ ಶಿಕ್ಷಣ ಮಂಡಳಿ ಸೋಮವಾರ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.
ಈಗ ಪ್ರತಿಭಟನೆ ಹಿಂಪಡೆದಿರುವ ಶಿಕ್ಷಕರು ಸರ್ಕಾರದ ಭರವಸೆ ನೀಡಿದ್ದ ಒಂದು ವರ್ಷದ ಭಡ್ತಿಯನ್ನು ಕೂಡ ನಿರಾಕರಿಸಿದೆ. ರಾಜ್ಯ ಸರ್ಕಾರ ನೀಡಿರುವ ಬಿಕ್ಷಾ ರೂಪದ ಹಣ ಬೇಡ ಎಂದು ಕೂಡ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
ಕಳೆದ 17 ದಿನಗಳಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಯು ಬೋರ್ಡ್ ಶಾಖಾಧಿಕಾರಿ ಹಾಗೂ ಸೂಪರಿಡೆಂಟ್ ಅವರು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರನ್ನು ಭೇಟಿ ಮಾಡಿ ನೋಟಿಸ್ ನೀಡಿದ್ದರು.
ಇನ್ನು ಪ್ರತಿಭಟನೆ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಎಚ್ಚರಿಸಿದ್ದರು.
ಪಿಯು ಉಪನ್ಯಾಸಕರ ವೇತನ ಪರಿಷ್ಕರಣೆಗೆಂದು ರಚಿಸಿದ್ದ ಕುಮಾರ್ ನಾಯಕ್ ಅವರ ಸಮಿತಿ 2001ರಲ್ಲಿ ವರದಿ ಸಲ್ಲಿಸಿದರೂ ಸಹ ಸರ್ಕಾರ ಇದರ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು.
Advertisement