
ಲಕನೌ: ಹಿಂದುತ್ವವಾದಿ ಸಂಘಟನೆಗಳಿಂದ ವಾರಣಾಸಿಯಲ್ಲಿ ನಿಗದಿಯಾಗಿರುವ ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಅವರ ಕಚೇರಿಗೆ ಅಡ್ಡಿಪಡಿಸುವ ಆತಂಕವಿದ್ದರೂ, ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಶನಿವಾರ ಹೇಳಿದ್ದಾರೆ.
ಏಪ್ರಿಲ್ ೨೬ ರಂದು ಹನುಮಾನ್ ದೇವಾಲಯದಲ್ಲಿ ಘಜಲ್ ಗಾಯಕ ಪ್ರದರ್ಶನ ನೀಡಲಿದ್ದಾರೆ.
ದೇವಾಲಯದ ಅರ್ಚಕ ವಿಶಂಬರ್ ನಾಥ್ ಮಿಶ್ರಾ ಅವರೊಂದಿಗೆ ಮಾತನಾಡಿರುವ ಗುಲಾಂ ಅಲಿ "ಭಜರಂಗ ಬಲಿ ಆಶೀರ್ವದಿಸಿ, ಅವನ ಪಾದದಡಿಯಲ್ಲಿ ಮತ್ತೆ ಹಾಡಲು ಕರೆದಿರುವುದಕ್ಕೆ ಧನ್ಯ" ಎಂದಿದ್ದಾರೆ.
ಕಳೆದ ಬಾರಿ ಸಂಕಟ್ ಮೊಚನ್ ದೇವಾಲಯದಲ್ಲಿ ಹಾಡಿದಾಗ ಒದಗಿದ ಆತ್ಮ ಶಾಂತಿಯನ್ನು ಯಾವುದೂ ಸರಿಗಟ್ಟಲು ಸಾಧ್ಯವಿಲ್ಲ ಎಂದು ಕೂಡ ಅವರು ಅರ್ಚಕರಿಗೆ ತಿಳಿಸಿದ್ದಾರೆ.
ಸಣ್ಣತನದ ಮನಸ್ಸಿಗಿಂತಲೂ ವಾರಣಾಸಿಯ ಸಂಸ್ಕೃತಿ ಬಲು ದೊಡ್ಡದು ಎಂದಿರುವ ಸಂಘಟಕರು ಪ್ರದರ್ಶನ ನಿಗದಿಯಂತೆ ನಡೆಯಲಿದೆ ಎಂದಿದ್ದಾರೆ.
ಹಿಂದು ಯುವ ವಾಹಿನಿ ಮತ್ತು ಶಿವ ಸೇನಾ ದಂತಹ ಕೆಲವು ಹಿಂದು ಸಂಘಟನೆಗಳು ಈ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿಯೊಡ್ಡುವ ಬೆದರಿಕೆ ಹಾಕಿದ್ದಾರೆ.
ಪಾಕಿಸ್ತಾನ ಗಾಯಕನ ಕಾರ್ಯಕ್ರಮವನ್ನು ವಿರೋಧಿಸಿ ಶಿವಸೇನೆಯ ಮುಖಂಡ ಅಜಯ್ ಚೌಬೆ ಭಿತ್ತಿಚಿತ್ರಗಳನ್ನು ಮತ್ತು ಬಿಲ್ಲೆಗಳನ್ನು ಹಂಚಿದ್ದಾರೆ. ಆದರೆ ಈ ವಿರೋಧಕ್ಕೆ ನಗರದಲ್ಲಿ ಬೆಂಬಲ ಕಂಡುಬಂದಿಲ್ಲ.
"ಈ ನಗರ ವಿಶಾಲ ಹೃದಯಿಗಳಿಗೆ ಸೇರಿದ್ದು, ಅಂತಹ ಸಣ್ಣ ಮನಸ್ಸಿನವರನ್ನು ಉದಾಸೀನ ಮಾಡುವುದೇ ಲೇಸು" ಎಂದು ಸಂಘಟಕರು ಹೇಳಿದ್ದಾರೆ.
Advertisement